ದಿಡುಪೆ :(ಅ.9) ಮಂಗಳವಾರ ಸುರಿದ ಭಾರೀ ಮಳೆಗೆ ದಿಡುಪೆಯಲ್ಲಿ ಅಕ್ಷರಶಃ ಪ್ರವಾಹ ಸೃಷ್ಟಿಯಾಗಿತ್ತು. ಮಳೆಯಿಂದಾಗಿ ಆನಡ್ಕ ನದಿ ಮತ್ತು ನಂದಿಕಾಡು ನದಿಗಳು ಉಕ್ಕಿ ಹರಿದು ಜನ ಜೀವನ ಅಸ್ತವ್ಯಸ್ತವಾಗಿತ್ತು. ದಿಡುಪೆಯ ಹಲವೆಡೆ ಮನೆ ಖಾಲಿ ಮಾಡಿ ಬೇರೆಡೆ ಸ್ಥಳಾಂತರ ಮಾಡಿಕೊಂಡ ಘಟನೆ ನಡೆಯಿತು.
ಇದನ್ನೂ ಓದಿ: 🟣ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ನಟ ರಿಷಬ್ ಶೆಟ್ಟಿ
ಪುಣ್ಕೆದಡಿಯಲ್ಲಿ ಮನೆಗೆ ನುಗ್ಗಿದ ನೀರು..!
ಮಿತ್ತಬಾಗಿಲು ಗ್ರಾಮದ ಪುಣ್ಕೆದಡಿಯಲ್ಲಿ ಮನೆಗೆ ನೀರು ನುಗ್ಗಿದ ಘಟನೆ ನಡೆದಿದೆ. ಆನಡ್ಕ ನದಿ ಮತ್ತು ನಂದಿಕಾಡು ನದಿಗಳು ಸಂಗಮವಾಗುವ ಪುಣ್ಕೆದಡಿ ಬಳಿ ಪ್ರವಾಹದಿಂದಾಗಿ ಮನೆಗೆ ನೀರು ನುಗ್ಗಿದೆ. ನೀರಿನ ಮಟ್ಟ ಜಾಸ್ತಿಯಾಗಿದ್ದರಿಂದ ರಮೇಶ್ ಗೌಡ ಅವರ ಮನೆಯಂಗಳಕ್ಕೆ ನೀರು ನುಗ್ಗಿತ್ತು. ಇದರಿಂದ ಭಯಗೊಂಡ ರಮೇಶ್ ಗೌಡ ದಂಪತಿ ಮನೆಯ ವಸ್ತುಗಳನ್ನು ಬೇರೆಡೆ ಸ್ಥಳಾಂತರ ಮಾಡಿ ಬೇರೆ ಜಾಗಕ್ಕೆ ತೆರಳಿದರು. ನದಿಗೆ ತಡೆಗೋಡೆ ನಿರ್ಮಿಸಿ ಈ ಸಮಸ್ಯೆಯಿಂದ ಪಾರು ಮಾಡುವಂತೆ ರಮೇಶ್ ಗೌಡ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಿಂಡಿ ಅಣೆಕಟ್ಟಿನಿಂದಲೂ ಪ್ರವಾಹದ ಸ್ಥಿತಿ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಗ್ಗಪಾಲದಲ್ಲಿ ಮುರಿದು ಬಿದ್ದ ತಡೆಗೋಡೆ..!
ಮಲವಂತಿಗೆ ಗ್ರಾಮದ ದಿಡುಪೆಯ ಅಗ್ಗಪಾಲದಲ್ಲಿ ಬಳಿಯಲ್ಲೂ ಪ್ರವಾಹ ಉಂಟಾಗಿತ್ತು. ಈ ಭಾಗದಲ್ಲಿ ಹರಿದು ಹೋಗುವ ಆನಡ್ಕ ನದಿಯಲ್ಲಿ ಪ್ರವಾಹ ಉಂಟಾಗಿ ಹಲವು ತೋಟಗಳಿಗೆ ನೀರು ನುಗ್ಗಿದ ಘಟನೆ ನಡೆದಿದೆ. ಅಲ್ಲದೇ ಇಲ್ಲಿನ ಸುಂದರ ಎನ್ನುವವರ ತೋಟಕ್ಕೆ ನೀರು ನುಗ್ಗಿದಲ್ಲದೇ ಮನೆಗೆ ಹತ್ತಿರ ನೀರು ಬಂದಿದೆ. ಸುಂದರ ಮನೆಯವರು ಭಯದಲ್ಲೇ ಕಳೆಯುವಂತಾಗಿದೆ. ಅಲ್ಲದೇ ಆನಡ್ಕ ನದಿಗೆ ಕಟ್ಟಲಾಗಿದ್ದ ತಡೆಗೋಡೆ ಕೂಡ ಕುಸಿತ ಉಂಟಾಗಿದೆ. ಅಲ್ಲದೇ, ಮಳೆಯ ಭೀಕರತೆಗೆ ಅಗ್ಗಪಾಲದಲ್ಲಿರುವ ಕಿರು ಸೇತುವೆಗೆ ಹಾನಿ ಉಂಟಾಗಿದೆ.
ಬಾಗಿದಾಡಿಯಲ್ಲಿ ತೋಟಕ್ಕೆ ನುಗ್ಗಿದ ನೀರು..!
ಮಲವಂತಿಗೆ ಗ್ರಾಮದ ದಿಡುಪೆಯ ಬಾಗಿದಡಿಯಲ್ಲೂ ಕೂಡ ಆನಡ್ಕ ನದಿ ಉಕ್ಕಿ ಹರಿದಿದ್ದರಿಂದ ತೋಟಗಳಿಗೆ ನೀರು ನುಗ್ಗಿದೆ. ಇಲ್ಲಿನ ವಸಂತ ಎನ್ನುವವರ ತೋಟಕ್ಕೆ ನೀರು ನುಗ್ಗಿದ್ದು, ದನದ ಕೊಟ್ಟಿಗೆಗೂ ನೀರು ನುಗ್ಗಿದೆ. ಮನೆಯಂಗಳಕ್ಕೂ ನೀರು ಬಂದಿದೆ. ಹೀಗಾಗಿ ವಸಂತ ಅವರ ಮನೆಯವರು ಕೂಡ ಭಯದಲ್ಲೇ ರಾತ್ರಿ ಕಳೆಯುವಂತೆ ಆಗಿತ್ತು. ನದಿಗೆ ತಡೆಗೋಡೆ ನಿರ್ಮಿಸಿದರೆ ಮಾತ್ರ ಈ ಸಮಸ್ಯೆ ಬಗೆ ಹರಿಯಬಹುದು ಅನ್ನುವುದು ವಸಂತ್ ಅವರ ಮಾತು. ತಡೆಗೋಡೆ ಸರ್ಕಾರದಿಂದ ಪಾಸ್ ಆಗಿದ್ದರೂ ಕೂಡ ತಡೆಗೋಡೆ ನಿರ್ಮಾಣವಾಗಿರಲಿಲ್ಲ ಅನ್ನುವುದು ವಸಂತ್ ಅವರ ಆರೋಪವಾಗಿದೆ.
ದಡ್ಡುಗದ್ದೆಯಲ್ಲಿ ಕೊಚ್ಚಿ ಹೋಯ್ತು ಅಡಿಕೆ,ತೆಂಗಿನಕಾಯಿ..!
ಮಲವಂತಿಗೆ ಗ್ರಾಮದ ದಿಡುಪೆಯ ದಡ್ಡುಗದ್ದೆಯಲ್ಲಿಯೂ ಆನಡ್ಕ ನದಿಯ ಆರ್ಭಟಕ್ಕೆ ಪ್ರವಾಹ ಉಂಟಾಗಿತ್ತು. ಇಲ್ಲಿನ ದಿನೇಶ್ ಎನ್ನುವವರ ಮನೆಯ ಅಂಗಳಕ್ಕೆ ನೀರು ನುಗ್ಗಿ 50 ಸಾವಿರ ಮೌಲ್ಯದ ಅಡಿಕೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಅಲ್ಲದೇ ತೆಂಗಿನಕಾಯಿ ಕೂಡ ನೀರಿನಲ್ಲಿ ಹೋಗಿದೆ. ಸುತ್ತ ನೀರು ಸುತ್ತುವರಿದು ಸುಂದರ ಅವರ ಮನೆ ದ್ವೀಪದಂತೆ ಆಗಿತ್ತು. ಮನೆಯಿಂದ ತಪ್ಪಿಸಿಕೊಂಡು ಹೋಗುವ ಸಂದರ್ಭ ಕೊಂಚದರಲ್ಲೇ ನೀರಿನಲ್ಲಿ ಸುಂದರ ಅವರು ಕೊಚ್ಚಿ ಹೋಗುತ್ತಿದ್ದರು ಎಂದು ಕಣ್ಣೀರು ಹಾಕಿ ಅವರು ಹೇಳಿದ್ದಾರೆ.