ಉಜಿರೆ :(ಅ.15) ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಅ. 20ರಂದು ಯುವಸಿರಿ…ರೈತ ಭಾರತದ ಐಸಿರಿ ಎನ್ನುವ ಐತಿಹಾಸಿಕ ಕಾರ್ಯಕ್ರಮ ಬೆಳಾಲಿನ ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿನಲ್ಲಿ ನಡೆಯಲಿದೆ ಎಂದು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಕೆ. ಮೋಹನ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: 🟣ಉಜಿರೆ:(ಅ.21 – ಅ. 30) ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ರಬ್ಬರ್ ಟ್ಯಾಪಿಂಗ್ ಉಚಿತ ತರಬೇತಿ
ಉಜಿರೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಐತಿಹಾಸಿಕ ಕಾರ್ಯಕ್ರಮ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ, ರೋಟರಿ ಕ್ಲಬ್ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕಿನ ಪತ್ರಕರ್ತರ ಸಂಘ, ಎಸ್.ಡಿ.ಎಂ ದೈಹಿಕ ವಿಭಾಗ, ಅನಂತ ಪದ್ಮನಾಭ ದೇವಸ್ಥಾನದದ ವ್ಯವಸ್ಥಾಪನಾ ಸಮಿತಿ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲ್ಲಿದ್ದು, 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ನೇಜಿನಾಟಿ ಕಾರ್ಯ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಬೆಳಗ್ಗೆ 9 ಗಂಟೆಗೆ ಸರಿಯಾಗಿ ಯುವಸಿರಿ ಕಾರ್ಯಕ್ರಮಕ್ಕೆ ದೇವಾಲಯದ ಆವರಣದಲ್ಲಿ ಶ್ರೀಮತಿ ಸೋನಿಯಾ ಯಶೋವರ್ಮ ಅವರು ಚಾಲನೆ ನೀಡಲಿದ್ದಾರೆ ಎಂದು ಮೋಹನ್ ಕುಮಾರ್ ಮಾಹಿತಿ ನೀಡಿದರು. ಇನ್ನು ಈ ವಿಶೇಷ ಕಾರ್ಯಕ್ರಮದಲ್ಲಿ ಕೃಷಿ ಸಾಧಕ ಶ್ರೀ ಬಿ.ಕೆ. ದೇವರಾವ್ ಅವರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಸಂಚಾಲಕ ಮೋಹನ್ ಕುಮಾರ್ ತಿಳಿಸಿದ್ದಾರೆ.
ಈ ವೇಳೆ ಬದುಕು ಕಟ್ಟೋಣ ಬನ್ನಿ ಸಂಚಾಲಕ ರಾಜೇಶ್ ಪೈ, ಎನ್. ಎಸ್ ಎಸ್ ಘಟಕದ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ, ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್, ಶ್ರೀಧರ್ ಕೆವಿ, ಚೈತ್ರೇಶ್ ಇಳಂತಿಲ ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ದೇಶವೇನು..?
ಭತ್ತ ಕೃಷಿ ಭಾರತದ ಪ್ರಮಖ ಆದಾಯದ ಮೂಲ ಮತ್ತು ಆಹಾರದ ಮಾರ್ಗವಾಗಿದೆ. ದೇಶದ ಆದಾಯಕ್ಕೂ ಭತ್ತ ಕೃಷಿಯ ಕೊಡುಗೆ ಇದೆ. ಆದರೆ ಇಂದಿನ ದಿನಗಳಲ್ಲಿ ಕೃಷಿ ಮಾಡುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ಯುವಕ – ಯುವತಿಯರಲ್ಲಿ ಕೃಷಿ ಬಗ್ಗೆ ಅರಿವು ಮೂಡಿಸುವ ಮತ್ತು ಯುವಕ-ಯುವತಿಯರನ್ನು ಕೃಷಿ ಕಡೆ ಸೆಳೆಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದೆ. ಕೃಷಿ ಬಗ್ಗೆ ಆಸಕ್ತಿ ಮೂಡಿಸಿ ಮಂದಿನ ದಿನಗಳಲ್ಲಿ ತಮ್ಮ ಊರಿನಲ್ಲೇ ಕೃಷಿ ಮಾಡಲು ಪ್ರೇರೇಪಿಸುವ ಮಹತ್ವದ ಕಾರ್ಯಕ್ರಮವಾಗಿದೆ.
2 ತಿಂಗಳಿಗೂ ಮೊದಲೇ ಕೃಷಿ ಚಟುವಟಿಕೆ ಆರಂಭ..!
ಭತ್ತ ಕೃಷಿ ಅಂದರೆ ಒಂದೇ ದಿನ ನಡೆಯುವ ಕಾರ್ಯವಲ್ಲ, ತಿಂಗಳುಗಳ ಕಾಲದಿಂದ ಕೃಷಿ ಚಟುವಟಿಕೆ ನಡೆಯುತ್ತದೆ. ಹೀಗಾಗಿ ಬದುಕು ಕಟ್ಟೋಣ ಬನ್ನಿ ತಂಡ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ NSS ವಿದ್ಯಾರ್ಥಿಗಳು, ದೈಹಿಕ ವಿಭಾಗದ ವಿದ್ಯಾರ್ಥಿಗಳಿಗೆ ಎರಡು ತಿಂಗಳಿನಿಂದ ಅನಂತೋಡಿನ ನಾಲ್ಕೂವರೆ ಎಕರೆ ಗದ್ದೆಯಲ್ಲಿ ಉಳುಮೆ, ಬೀಜ ಬಿತ್ತನೆ, ಪುಣಿ ಕಟ್ಟುವ ಕಾರ್ಯ ಹೀಗೆ ಕೃಷಿ ಚಟುವಟಿಕೆ ವಿದ್ಯಾರ್ಥಿಗಳಿಂದ ನಡೆದಿದೆ. ನಿರಂತರವಾಗಿ ವಿದ್ಯಾರ್ಥಿಗಳು ಈ ಯುವಸಿರಿಯ ಪೂರ್ವಭಾವಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.