Wed. Nov 20th, 2024

Mangalore: ನಾಪತ್ತೆಯಾದ ಅಮ್ಮನಿಗಾಗಿ 14 ವರ್ಷ ಹುಡುಕಾಟದ ವನವಾಸ – ಮಂಗಳೂರಿನಲ್ಲಿ ಕೊನೆಗೂ ಮಗನಿಗೆ ಸಿಕ್ಕ ತಾಯಿ!

ಮಂಗಳೂರು:(ಅ.19) ಜಗತ್ತಿನಲ್ಲಿ ತಾಯಿ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾವುದು ಇಲ್ಲಾ!! ತಾಯಿಯೇ ಮೊದಲ ದೇವರು. ಹಾಗೆಯೇ ತಾಯಿ ಮಗನ ಸಂಬಂಧ ನಿಷ್ಕಲ್ಮಶವಾಗಿರುವಂತಹದ್ದು. ತಾಯಿ ಮಗನನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅಂತಹದೇ ಒಂದು ಘಟನೆ ಇಲ್ಲಿ ನಡೆದಿದೆ.

ನಗರದ ಬೀದಿಯಲ್ಲಿ ನಿರ್ಗತಿಕಳಾಗಿ ಪತ್ತೆಯಾಗಿದ್ದ ಮಹಿಳೆ 14 ವರ್ಷಗಳ ಬಳಿಕ ತನ್ನ ಕುಟುಂಬ ಸೇರಿದ ಘಟನೆ ನಡೆದಿದೆ.

ಇದನ್ನೂ ಓದಿ: ತಣ್ಣೀರುಪಂತ : ವಿ.ಪ. ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪರವಾಗಿ

ಫರ್ಜಾನ ಎಂಬವರು ಮಂಗಳೂರಿನ ಹೊಯಿಗೆ ಬಜಾರ್​ನಲ್ಲಿ 2009ರಲ್ಲಿ ನಿರ್ಗತಿಕರಾಗಿ, ಮಾನಸಿಕ ಅಸ್ವಸ್ಥೆಯಾಗಿ ಅಲೆದಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರಿನ ಸೇವಾ ಸಂಸ್ಥೆ ವೈಟ್ ಡೌಸ್‌ನ ಕೊರಿನಾ ರಸ್ಕಿನ್ ಅವರು, ಮಹಿಳೆಗೆ ಚಿಕಿತ್ಸೆ ಕೊಡಿಸಿ ಆಶ್ರಯ ನೀಡಿದ್ದರು. ಈ ವೇಳೆ ಮಹಿಳೆ ಬಳಿ ತನ್ನೂರಿನ ಮತ್ತು ಕುಟುಂಬದ ಬಗ್ಗೆ ಕೇಳಿದಾಗ ನಿಖರ ಮಾಹಿತಿ ನೀಡುತ್ತಿರಲಿಲ್ಲ.

ಕೇವಲ ಮದ್ದೂರು ಮಾಂಸದಂಗಡಿ ಬಳಿ ಮನೆ ಇರುವುದಾಗಿ ಹೇಳುತ್ತಿದ್ದರು. ರಾಜ್ಯದ ಹಲವೆಡೆ ಮದ್ದೂರು ಹೆಸರಿನಲ್ಲಿ ಊರುಗಳಿದ್ದು, ಯಾವ ಮದ್ದೂರು ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ವೈಟ್ ಡೌಸ್ ಸಂಸ್ಥೆ ಹಲವೆಡೆಗೆ ತಮ್ಮ ಸಿಬ್ಬಂದಿಯನ್ನು ಕಳುಹಿಸಿ ಹುಡುಕಿಸಿದ್ದರೂ ಕುಟುಂಬಸ್ಥರು ಪತ್ತೆಯಾಗಿರಲಿಲ್ಲ.

14 ವರ್ಷಗಳ ಬಳಿಕ ಒಂದಾದ ತಾಯಿ–ಮಕ್ಕಳು:

ಇತ್ತೀಚೆಗೆ ಮಂಡ್ಯದ ಮದ್ದೂರಿನ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ಆಕೆಯ ಕುಟುಂಬಸ್ಥರು ಗುರುತಿಸಿ ಕರೆದುಕೊಂಡು ಹೋಗಲು ವೈಟ್ ಡೌಸ್​ಗೆ ಬಂದಿದ್ದರು. ಈ ವೇಳೆ ಅವರಿಗೆ ಫರ್ಜಾನ ಬಗ್ಗೆ ಮದ್ದೂರಿನಲ್ಲಿರುವ ಮಾಂಸದಂಗಡಿಯವರಿಗೆ ಮಾಹಿತಿ ನೀಡುವಂತೆ ಚೀಟಿಯೊಂದನ್ನು ಕೊಟ್ಟು ಕಳುಹಿಸಲಾಗಿತ್ತು. ಈ ಚೀಟಿ ಅದೃಷ್ಟವಶಾತ್ ಫರ್ಜಾನ ಪುತ್ರ ಆಸೀಫ್​ಗೆ ಸಿಕ್ಕಿದೆ. ನಂತರ ಅವರು ತಮ್ಮ ತಾಯಿಯನ್ನು ಕರೆದುಕೊಂಡು ಹೋಗಲು ತಂಗಿ, ಬಾವ ಮತ್ತು ಹೆಂಡತಿ – ಮಕ್ಕಳೊಂದಿಗೆ ಇಂದು ಮಂಗಳೂರಿನ ವೈಟ್ ಡೌಸ್​ಗೆ ಆಗಮಿಸಿದ್ದರು.

ತನ್ನನ್ನು ಕರೆದುಕೊಂಡು ಹೋಗಲು ಬಂದ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕಂಡ ಫರ್ಜಾನ ಖುಷಿಗೆ ಪಾರವೇ ಇರಲಿಲ್ಲ.

ಈ ಕುರಿತು ಮಾತನಾಡಿದ ಆಸೀಫ್, “ಹಲವು ವರ್ಷಗಳಿಂದ ಹುಡುಕಾಡಿದ್ದರೂ ತಾಯಿ ಪತ್ತೆಯಾಗಿರಲಿಲ್ಲ. ಇಂದು ತುಂಬಾ ಖುಷಿಯಾಗಿದೆ. ನನಗೆ ತಾಯಿಯ ನೆನಪಿದೆ, ಆದರೆ ನನ್ನ ತಂಗಿಗೆ ತಾಯಿಯ ನೆನಪಿಲ್ಲ. ಆಕೆ ಇದೇ ಮೊದಲ ಬಾರಿಗೆ ತಾಯಿಯನ್ನು ನೋಡುತ್ತಿದ್ದಾಳೆ” ಎಂದು ಸಂತಸ ವ್ಯಕ್ತಪಡಿಸಿದರು.

ವೈಟ್ ಡೌಸ್ ಸಂಸ್ಥೆಯ ಸ್ಥಾಪಕಿ ಕೊರಿನಾ ರಸ್ಕಿನ್ ಮಾತನಾಡಿ, “2009 ಆಗಸ್ಟ್​ನಲ್ಲಿ ಫರ್ಜಾನ ಸಿಕ್ಕಿದ್ದರು. ಆಗ ಅವರು ಸರಿಯಾದ ಮಾಹಿತಿ ನೀಡಿರಲಿಲ್ಲ. ನಮಗೆ ಆಕೆ ಮನೆ ಸೇರುವ ಬಗ್ಗೆ ವಿಶ್ವಾಸವೇ ಇರಲಿಲ್ಲ. ಎರಡು ವಾರದ ಹಿಂದೆ ಮದ್ದೂರಿನ ಮಹಿಳೆಯೊಬ್ಬರನ್ನು ಮನೆ ಸೇರಿಸಲಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ ಫರ್ಜಾನ ಬಗ್ಗೆ ಮಾಹಿತಿ ನೀಡಿದ್ದೆವು. ಅವರ ಸಹಾಯದಿಂದ ಇದೀಗ ಫರ್ಜಾನ ಕುಟುಂಬಸ್ಥರು ಸಿಕ್ಕಿದ್ದಾರೆ” ಎಂದು ತಿಳಿಸಿದರು.

Leave a Reply

Your email address will not be published. Required fields are marked *