ಹಾವೇರಿ: (ಅ.24) ಪ್ರೀತಿ ಮಾಡಬಾರದು.. ಮಾಡಿದರೇ ಜಗಕೆ ಹೆದರಬಾರದು. ಹೀಗೆ ಇಲ್ಲೊಂದು ಜೋಡಿ ಯಾರಿಗೂ ಜಗ್ಗದೇ ಬಗ್ಗದೇ ಪ್ರೇಮಲೋಕದಲ್ಲಿ ಮುಳುಗಿತ್ತು. ಹೀಗೆ ಪ್ರೀತಿ ಮಾಡುತ್ತಾ ಹೆತ್ತವರ ವಿರೋಧದ ಮಧ್ಯೆಯೂ ವಿವಾಹವಾಗಿತ್ತು. ಆದರೀಗ ಯುವ ಜೋಡಿಗೆ ಪೊಲೀಸರೇ ವಿಲನ್ ಆಗಿದ್ದಾರೆ. ನವಜೋಡಿಯನ್ನು ಬೇರ್ಪಡಿಸಿ ಪ್ರಿಯಕರನ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ⭕ಮಂಗಳೂರು: ಶಾಲಾ ಮಕ್ಕಳಿದ್ದ ರಿಕ್ಷಾಕ್ಕೆ ಪಿಕಪ್ ಡಿಕ್ಕಿ
ಬೇಕೇ ಬೇಕು ನ್ಯಾಯ ಬೇಕು ಎಂಬ ಘೋಷಣೆ. ನಿಷ್ಕಲ್ಮಷ ಪ್ರೀತಿಗೆ ನ್ಯಾಯ ಸಿಗಬೇಕು ಎಂಬ ಪ್ರಾರ್ಥನೆ. ಪೊಲೀಸ್ ಠಾಣೆಯ ಮುಂದೆ ಯುವಕನ ಪ್ರತಿಭಟನೆ. ಇದು ಪ್ರೀತಿಗಾಗಿ ಹೋರಾಟ. ಪ್ರೀತಿಸಿ ಮದುವೆಯಾದ ಹೆಂಡತಿಗಾಗಿ ಪತಿಯ ಆಕ್ರೋಶ.
ಪ್ರಿಯಕರ ಪ್ರದೀಪ್ ಬಣಕಾರ್ ಪ್ರಿಯತಮೆ ತಂಜಿಮ್ ಭಾನುವನ್ನು ಪ್ರೀತಿಸುತ್ತಿದ್ದ. ಕೊನೆಗೆ ಇಬ್ಬರು ಮನವೊಪ್ಪಿಕೊಂಡು ಮಧ್ಯೆ ಕೂಡ ಆಗಿದ್ದಾರೆ. ಆದರೆ ಅಂತರ್ ಧರ್ಮೀಯ ಮದುವೆ ಆಗಿರುವ ಈ ನವಜೋಡಿಗೆ ಈಗ ಧರ್ಮವೇ ಅಡ್ಡಿಯಾಗಿದೆ. ಮದುವೆಯಾದ 15 ದಿನಕ್ಕೆ ಜೋಡಿಹಕ್ಕಿಗಳನ್ನು ಪೊಲೀಸರೇ ಬೇರ್ಪಡಿಸಿರೋ ಆರೋಪ ಕೇಳಿಬಂದಿದೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಮೇಡ್ಲೆರಿ ಗ್ರಾಮದ ಪ್ರದೀಪ್ ಬಣಕಾರ್, ಗುತ್ತಲ ಪಟ್ಟಣದ ಅನ್ಯಕೋಮಿನ ಯುವತಿ ತಂಜಿಮ್ ಭಾನು ಪರಸ್ಪರ ಪ್ರೀತಿಸ್ತಿದ್ರು. 3 ವರ್ಷಗಳಿಂದ ಪ್ರೀತಿ- ಪ್ರೇಮದಲ್ಲಿ ಮುಳುಗಿದ್ದ ಪ್ರದೀಪ್ ಬಣಕಾರ್-ತಂಜಿಮ್ ಭಾನು, 15 ದಿನಗಳ ಹಿಂದೆ ಮನೆಬಿಟ್ಟು ಹೋಗಿ ಮದುವೆಯಾಗಿದ್ರು.
ಬಳಿಕ ರಕ್ಷಣೆಗಾಗಿ ಹಾವೇರಿ ಮಹಿಳಾ ಠಾಣೆಗೆ ಈ ಜೋಡಿ ಬಂದಿತ್ತು. ಆದ್ರೆ, ರಕ್ಷಣೆ ಕೊಡಬೇಕಾದ ಪೊಲೀಸರೇ ನವಜೋಡಿಯನ್ನು ಬೇರ್ಪಡಿಸಿರುವ ಆರೋಪ ಕೇಳಿಬಂದಿದೆ. ಪ್ರದೀಪ್‌ನಿಂದ ತಂಜೀಮ್‌ನ ಬೇರ್ಪಡಿಸಿ ಮಹಿಳಾ ಸಾಂತ್ವನಕ್ಕೆ ಪೊಲೀಸರೇ ಕಳಿಸಿಕೊಟ್ಟಿದ್ದಾರೆ ಎಂಬ ಆರೋಪವಿದೆ.
ತನ್ನ ಪತ್ನಿಯನ್ನು ಸಾಂತ್ವನ ಕೇಂದ್ರಕ್ಕೆ ಕಳಿಸಿಕೊಡ್ತಿದ್ದಂತೆ ಪ್ರದೀಪ್ ಬಣಕಾರ್ ಆಕ್ರೋಶದ ಕಟ್ಟೆಯೊಡೆದಿತ್ತು. ಪ್ರೀತಿಸಿ ಮದುವೆಯಾದವಳನ್ನ ಪೊಲೀಸರೇ ಬೇರ್ಪಡಿಸಿದ್ದಾರೆ ಅಂತ ಪೊಲೀಸ್ ಠಾಣೆ ಎದುರು ಪ್ರದೀಪ್ ಪ್ರತಿಭಟನೆ ಮಾಡಿದ್ದಾನೆ. ಪ್ರದೀಪ್ ಹೋರಾಟಕ್ಕೆ ಆತನ ಸ್ನೇಹಿತರೂ ಕೈ ಜೋಡಿಸಿದ್ದರು.