Wed. Nov 20th, 2024

Ujire: ಉಜಿರೆ ಎಸ್‌.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ “ಸರ್‌ ಮಿರ್ಜಾ ಇಸ್ಮಾಯಿಲ್‌” ಜನ್ಮ ದಿನಾಚರಣೆ

ಉಜಿರೆ:(ಅ.26) ಬಾಹ್ಯರೂಪದ ಕಾರಣದಿಂದ ಸಾಮಾಜಿಕವಾಗಿ ಗುರುತಿಸಿಕೊಳ್ಳಬಾರದು. ಪ್ರತಿಭೆ ಮತ್ತು ವ್ಯಕ್ತಿತ್ವದಿಂದ ಇತರರು
ಗುರುತಿಸುವಂತೆ ಬೆಳೆಯಬೇಕು ಎಂದು ಉಜಿರೆ ಶ್ರೀ ಧ.ಮಂ. ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಹಾವೀರ ಜೈನ್‌ ಹೇಳಿದರು.

ಇದನ್ನೂ ಓದಿ: 🟣ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳು ರೂರಲ್ ಐಟಿ ಕ್ವಿಜ್ ಸ್ಪರ್ಧೆಯಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆ

ಉಜಿರೆ ಎಸ್‌.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಜನ್ಮಾದಿನಾಚರಣೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಮೈಸೂರಿನ ದಿವಾನರಾಗಿದ್ದ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರು ಜೀವನದಲ್ಲಿ ಶಿಸ್ತು ಮತ್ತು ಸಮಯಪಾಲನೆ ಕಾಪಾಡಿಕೊಂಡು ಉನ್ನತ ಸ್ಥಾನಕ್ಕೆ ಏರಿದ್ದರು. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ಪಾಲಿಸಬೇಕು.

ಅವರು ಮೈಸೂರಿನ ದಿವಾನರಾಗಿದ್ದ ಕಾಲದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಖಾನೆ ಮತ್ತು ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಆಧುನಿಕ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ.

ಬ್ರಿಟಿಷ್‌ ಆಡಳಿತಾವಧಿಯಲ್ಲಿ ಮೈಸೂರು ಸಂಸ್ಥಾನ ಹೊರದೇಶಗಳಲ್ಲೂ ಗುರುತಿಸಿಕೊಳ್ಳಲು ಮಿರ್ಜಾ ಇಸ್ಮಾಯಿಲ್‌ ಕಾರಣರಾಗಿದ್ದಾರೆ ಎಂದರು.

ವಿದ್ಯೆ ಬದುಕಿಗೆ ಅನ್ನ ನೀಡಿದರೆ, ಸಂಸ್ಕಾರ ಬದುಕಿಗೆ ಅರ್ಥ ನೀಡುತ್ತದೆ. ಸಮಾಜದಲ್ಲಿ ಮಹಾನ್‌ ವ್ಯಕ್ತಿಗಳಾದವರು ಮನ್ನಣೆ ಪಡೆದಿರುವುದು ತಮ್ಮ ಸಂಸ್ಕಾರ ಮತ್ತು ಸಮಾಜಮುಖಿ ಕೆಲಸಗಳಿಂದ. ಆ ರೀತಿಯ ಸಂಸ್ಕಾರ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗಳದ್ದಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಸ್ನಾತಕೋತ್ತರ ಕೇಂದ್ರದ ಡೀನ್‌ ಡಾ. ವಿಶ್ವನಾಥ ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಿರ್ಜಾ ಇಸ್ಮಾಯಿಲ್‌ ಅವರ ಜೀವನ ದರ್ಶನ ಮಾಡುವುದರಿಂದ ವಿದ್ಯಾರ್ಥಿಗಳು ಆದರ್ಶಪ್ರಾಯವಾದ ಬದುಕನ್ನು ಕಟ್ಟಿಕೊಳ್ಳಬಹುದು. ಸನ್ನಡತೆಯುಳ್ಳವರಾಗಿ ಮೌಲ್ಯಯುತ ಜೀವನ ನಡೆಸಿ ಹೆತ್ತವರಿಗೆ ಮತ್ತು ಕಲಿಯುತ್ತಿರುವ ವಿದ್ಯಾಸಂಸ್ಥೆಗಳಿಗೆ ಹೆಮ್ಮೆ ತರುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ಕಛೇರಿ ತೆರೆಯಲು ಮಿರ್ಜಾ ಇಸ್ಮಾಯಿಲ್‌ ಅವರು ಪ್ರಮುಖ ಕಾರಣೀಕರ್ತರಾಗಿದ್ದಾರೆ.
ಅವರು ಕನ್ನಡಕ್ಕೆ ಕೊಟ್ಟಿರುವ ಕೊಡುಗೆಗಳನ್ನು ನೆನಪಿಸಿಕೊಳ್ಳಬೇಕು ಎಂದರು. ಸಮಾಜ ಕಾರ್ಯ ವಿಭಾಗ ಮುಖ್ಯಸ್ಥ ಡಾ. ರವಿಶಂಕರ್‌ ಕೆ ಉಪಸ್ಥಿತರಿದ್ದರು. ದಿವ್ಯಶ್ರೀ ಹೆಗಡೆ ನಿರೂಪಿಸಿದರು. ಕಲಾನ್ವಿತ ಜೈನ್‌ ಮತ್ತು ಪ್ರತೀಕ್ಷಾ ಪ್ರಾರ್ಥಿಸಿದರು. ದರ್ಶಿನಿ ತಿಪ್ಪಾರೆಡ್ಡಿ ಧನ್ಯವಾದ ಸಲ್ಲಿಸಿದರು.

Leave a Reply

Your email address will not be published. Required fields are marked *