ಅಜೆಕಾರು:(ಅ.27) ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿ ಪ್ರತಿಮಾಳನ್ನು ಬಂಧನ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ⭕ಮದ್ಯ ಪ್ರಿಯರಿಗೆ ಬಿಗ್ ಶಾಕ್!
ಅನ್ನದಲ್ಲಿ ಸ್ಲೋ ಪಾಯ್ಸನ್ ಹಾಕಿ ತನ್ನ ಕೈಯಾರೆ ತನ್ನ ಗಂಡನಿಗೆ ಊಟ ಮಾಡಿಸುತ್ತಿದ್ದಳು ಈಕೆ. ಆರೋಪಿ ಪ್ರತಿಮಾ ತನ್ನ ಪತಿ ಬಾಲಕೃಷ್ಣಗೆ ಅನ್ನದಲ್ಲಿ ರಕ್ತದ ಕ್ಯಾನ್ಸರ್‌ಗೆ ನೀಡುವ Arsenic Trioxide ಎಂಬ ಕಿಮೋಥೆರಪಿ ಮದ್ದು ಬೆರೆಸಿ ನೀಡುತ್ತಿದ್ದಳು. ಅಂದ ಹಾಗೆ ಈ ಮದ್ದು ಯಾವುದೇ ಟೇಸ್ಟ್ ಹೊಂದಿರುವುದಿಲ್ಲ. ಕಳೆದ ಒಂದೂವರೆ ತಿಂಗಳಿನಿಂದ ಅನ್ನದ ಜೊತೆ ಈ ಮದ್ದನ್ನು ಬೆರೆಸಿ ನೀಡುತ್ತಿದ್ದಳೀಕೆ.
ಇದ್ಯಾವುದೂ ಗೊತ್ತಿಲ್ಲದೇ ಬಾಲಕೃಷ್ಣ ಊಟ ಮಾಡುತ್ತಿದ್ದರು. ಹಲವು ಬಾರಿ ಈಕೆನೇ ವಿಷದ ಅನ್ನವನ್ನೇ ಕೈ ತುತ್ತು ಮಾಡಿ ತಿನ್ನಿಸುತ್ತಿದ್ದಳು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ವಿಷಪೂರಿತ ಆಹಾರ ತಿಂದ ಗಂಡನ ಆರೋಗ್ಯ ಹದಗೆಟ್ಟಿದ್ದು, ನಂತರ ಮನೆಮಂದಿ ಕಾರ್ಕಳ, ಮಣಿಪಾಲ, ಮಂಗಳೂರು, ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಪತ್ನಿ ಪ್ರತಿಮಾ ಜೊತೆಗೆ ಇದ್ದರೂ ಗಂಡನ ಚಿಕಿತ್ಸೆ, ಆರೈಕೆಯ ಬಗ್ಗೆ ಗಮನವೇ ನೀಡುತ್ತಿರಲಿಲ್ಲ. ಆಸ್ಪತ್ರೆಯಲ್ಲಿ ಬಾಲಕೃಷ್ಣ ಅವರ ಚಿಕ್ಕಮ್ಮನೇ ಎಲ್ಲ ನೋಡಿಕೊಳ್ಳುತ್ತಿದ್ದರು.
ಕೆಲವೊಮ್ಮೆ ಆಸ್ಪತ್ರೆಯಿಂದ ಪ್ರತಿಮಾ ಬೆಳಗ್ಗೆ ಹೋದರೆ ಮಧ್ಯಾಹ್ನದ ವೇಳೆಗೋ, ಸಂಜೆಯ ವೇಳೆಗೋ ಬರುತ್ತಿದ್ದಳು ಎಂದು ಚಿಕ್ಕಮ್ಮ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಇದ್ದಾಗಲೂ ಈಕೆ ತನ್ನ ಫೋನ್, ಚಾಟ್ ಇದರಲ್ಲೇ ಮುಳುಗುತ್ತಿದ್ದಳು. ರಾತ್ರಿ ಕೂಡಾ ಫೋನ್‌ನಲ್ಲಿದ್ದು, ನಂತರ ಮಲಗುತ್ತಿದ್ದಳು. ರಾತ್ರಿ ಕೂಡಾ ಚಿಕ್ಕಮ್ಮನೇ ಬಾಲಕೃಷ್ಣ ಅವರ ಸೇವೆ ಮಾಡುತ್ತಿದ್ದರು.
ಆದರೆ ಇದೇ ಪ್ರತಿಮಾ ತನ್ನ ಪತಿಯನ್ನು ಅ.19 ರಂದು ಮನೆಗೆ ಕರೆದುಕೊಂಡು ಬಂದ ದಿನ ಮಾತ್ರ ಮುಂಜಾನೆಯವರೆಗೂ ಜಾಗರಣೆ ಕುಳಿತು ತನ್ನ ಪ್ರಿಯಕರನನ್ನು ಕರೆದು ಕೊಲೆ ಮಾಡಿಸಿದ್ದಳು.
ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಬಾಲಕೃಷ್ಣ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಹಾಗಾಗಿ ಅ.19 ರಂದು ಡಿಸ್ಟಾರ್ಜ್ ಮಾಡಲಾಗಿತ್ತು. ಬೆಂಗಳೂರಿನಿಂದ ಹೊರಟು ರಾತ್ರಿ 8 ಗಂಟೆಗೆ ಅಜೆಕಾರಿನ ಮನೆಗೆ ಬಂದಿದ್ದರು. ಈ ಸಮಯದಲ್ಲಿ ಸಂಬಂಧಿಕರು ಇದ್ದರು. ಎಲ್ಲರ ಬಳಿ ಬಾಲಕೃಷ್ಣ ಮಾತಾಡಿದ್ದರು. ಮಧ್ಯರಾತ್ರಿಯವರೆಗೂ ಸಂದೀಪ್ (ಪ್ರತಿಮಾಳ ಅಣ್ಣ) ಕೂಡಾ ಇದ್ದು, ಊಟ ಮಾಡಿ ನಂತರ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದರು.
ಆದರೆ ಸಂಬಂಧಿಕರನ್ನು ಪ್ರತಿಮಾ ಬೇಗನೇ ಮನೆಗೆ ಕಳುಹಿಸಿದ್ದಳು. ಆದರೆ ಚಿಕ್ಕಮ್ಮ ರಾತ್ರಿ ಕೂಡಾ ಇಲ್ಲೇ ಇರುವುದನ್ನು ಕಂಡ ಪ್ರತಿಮಾ ಅವರನ್ನು ಕೂಡಾ ಸಾಗ ಹಾಕಿದ್ದಳು. ಚಿಕ್ಕಮ್ಮನ ಮನೆ 50 ಮೀಟರ್ ದೂರದಲ್ಲಿಯೇ ಇದ್ದುದರಿಂದ ಮಧ್ಯರಾತ್ರಿಯೇ ಅವರು ತಮ್ಮ ಮಕ್ಕಳೊಂದಿಗೆ ಹೋದರು.
ಮನೆಯಿಂದ ಎಲ್ಲರೂ ಹೊರ ಹೋದ ನಂತರ ಮಧ್ಯರಾತ್ರಿಯಲ್ಲಿ ಪ್ರಿಯಕರ ದಿಲೀಪ್ ಹೆಗ್ಡೆ ಕರೆ ಮಾಡಿದ ಪ್ರತಿಮಾ ಮನೆಗೆ ಬರ ಹೇಳಿದ್ದಾಳೆ. ಬಾಲಕೃಷ್ಣ ಅವರ ತಂದೆ ತಾಯಿ, ಸಂಬಂಧಿಕರ ಮನೆ ಹತ್ತಿರವೇ ಇತ್ತು. ಹಾಗಾಗಿ ದಿಲೀಪ್ 100 ಮೀಟರ್ ದೂರದಲ್ಲಿಯೇ ಸ್ಕೂಟರ್ ನಿಲ್ಲಿಸಿ ನಡೆದುಕೊಂಡು ಬಂದಿದ್ದ. 1.30 ರ ವೇಳೆ ಮನೆಗೆ ಬಂದಿದ್ದ ದಿಲೀಪ್ ಬಾತ್‌ರೂಮಿನಲ್ಲಿ ಅಡಗಲು ಪ್ರತಿಮಾ ಹೇಳಿದ್ದಳು. ಪತಿ ಗಾಢ ನಿದ್ರೆಗೆ ಜಾರುವುದನ್ನೇ ಕಾಯುತ್ತಿದ್ದ ಈಕೆ ನಂತರ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡೇ ಬಿಟ್ಟಳು.
ಬಾಲಕೃಷ್ಣ ಗಾಢ ನಿದ್ರೆಗೆ ಜಾರಿದಾಗ ಪ್ರಿಯಕರನನ್ನು ಬೆಡ್‌ರೂಮಿಗೆ ಕರೆದ ಪ್ರತಿಮಾ, ನಂತರ ತಲೆದಿಂಬನ್ನು ದಿಲೀಪ್ ಒತ್ತಿ ಹಿಡಿದರೆ, ಪ್ರತಿಮಾ ಸ್ವತಃ ಪತಿಯ ಎದೆ ಮತ್ತು ಕಾಲನ್ನು ಒತ್ತಿ ಹಿಡಿದು ಮಿಸುಕಾಡದಂತೆ ಮಾಡಿದ್ದಳು. ನಂತರ ಪತಿ ಸತ್ತ ಎನ್ನುವುದನ್ನು ಖಾತ್ರಿ ಮಾಡಿಕೊಂಡ ಈಕೆ ಪ್ರಿಯಕರನನ್ನು ಕಳುಹಿಸಿದ್ದಳು. ಇವರ ಈ ಕೃತ್ಯ ಮುಗಿದಾಗ ಮುಂಜಾನೆ 2.30 ಆಗಿತ್ತು.
ಪ್ರಿಯಕರ ಮನೆ ಸೇರಿದ ಬಳಿಕ ರಾತ್ರಿ 3 ಗಂಟೆಯ ವೇಳೆ ಬಾಲಕೃಷ್ಣ ಅವರ ತಂದೆ, ತಾಯಿಗೆ ಫೋನ್ ಮಾಡಿದ ಪ್ರತಿಮಾ ಬೊಬ್ಬೆ ಹಾಕಿದ್ದಾಳೆ. ವಿಷಯ ಏನೆಂದು ತಿಳಿಸದೆ ಈಕೆ ಬರೀ ಕೂಗುವುದು ಕೇಳಿಸಿತ್ತು. ಕೂಡಲೇ ಅವರು ಮನೆಗೆ ಬಂದಿದ್ದರು. ಅಣ್ಣ ಸಂದೀಪ್ ಗೂ ಕರೆ ಮಡಿ ಬೊಬ್ಬೆ ಹಾಕುವ ನಾಟಕ ಮಾಡಿದ್ದಳು.
ಆದರೆ ಮನೆಗೆ ಬಂದ ಪ್ರತಿಮಾಳ ಅಣ್ಣ ಸಂದೀಪ್‌ಗೆ ಬಾಲಕೃಷ್ಣ ಅವರ ಮುಖದ ಹತ್ತಿರ ಕೆಂಪಾಗಿರುವುದು, ಕುತ್ತಿಗೆಯ ಬಳಿ ಉಗುರಿನಿಂದ ಪರಚಿದ ಗಾಯ ಕಂಡು ಬಂದು ತಂಗಿಯಲ್ಲಿ ಪ್ರಶ್ನೆ ಮಾಡಿದ್ದರು. ಆಕೆ ರಾತ್ರಿ ಉಸಿರಾಡಲು ಕಷ್ಟ ಪಡುತ್ತಿದ್ದರು, ನೀರು ಕೊಡಲು ಪ್ರಯತ್ನಿಸಿದೆ. ಆದರೆ ಅವರು ಏನು ಮಾಡಿದರೂ ಸ್ಪಂದಿಸಿಲ್ಲ. ಇಷ್ಟೆಲ್ಲ ಮಾಡಿದರೂ ಹೀಗೆ ಆಯಿತಲ್ವ ಎಂದು ಗೊಂದಲದಲ್ಲಿ ನೀರಿನ ಬಾಟಲಿಯನ್ನು ಎಸೆದೆ, ಅದು ಅವರ ಮುಖದ ಮೇಲೆ ಬಿತ್ತು. ಇದರಿಂದ ಕೆಂಪಗಾಗಿರಬಹುದು ಎಂದು ಹೇಳಿದ್ದು, ನೀರು ಕೊಡುವಾಗ ಕುತ್ತಿಗೆ ಎತ್ತಿದ್ದಾಗ ಉಗುರು ತಾಗಿರಬಹುದು ಎಂದು ಹೇಳಿದ್ದಾಳೆ.
ಆರೋಪಿ ದಿಲೀಪ್ ವಿಷವನ್ನು ಉಡುಪಿಯಲ್ಲಿ ಖರೀದಿ ಮಾಡಿದ್ದ. ನಂತರ ಅದನ್ನು ಪ್ರತಿಮಾಗೆ ನೀಡಿದ್ದ. ಇದೀಗ ಪೊಲೀಸ್ ಕಸ್ಟಡಿಯಲ್ಲಿ ಇರುವ ದಿಲೀಪ್‌ನನ್ನು ಶನಿವಾರ ಉಡುಪಿಗೆ ಕರೆ ತಂದು ವಿಷ ಖರೀದಿ ಮಾಡಿದ ಅಂಗಡಿಯಲ್ಲಿ ಮಾಹಿತಿ ಸಂಗ್ರಹ ಮಾಡಲಾಗಿದೆ. ದಿಲೀಪ್ ಮತ್ತು ಪ್ರತಿಮಾಳ ಮೊಬೈಲ್ ಫೋನ್ ಹಾಗೂ ಸ್ಕೂಟರ್, ಕಾರನ್ನು ವಶಕ್ಕೆ ಪಡೆಯಲಾಗಿದೆ.
ಮರಣೋತ್ತರ ವರದಿ ಪರೀಕ್ಷೆ ಇನ್ನಷ್ಟೇ ಬರಬೇಕಿದೆ ಎಂದು ಎಸ್.ಪಿ. ಡಾ.ಅರುಣ್ ಕುಮಾರ್ ಹೇಳಿದ್ದಾರೆ.