Wed. Nov 20th, 2024

Dharmasthala: ಧರ್ಮಸ್ಥಳದ ಸುತ್ತಮುತ್ತ ಅನಧಿಕೃತ ಹೋಂ ಸ್ಟೇ, ಲಾಡ್ಜ್- ಏಜೆಂಟರ ಮೂಲಕ ಯಾತ್ರಾರ್ಥಿಗಳಿಗೆ ವಂಚನೆ – ಕಾನೂನು ಕ್ರಮಕ್ಕೆ ಒತ್ತಾಯಿಸಿದ ಖಾಸಗಿ ವಸತಿಗೃಹ ಮಾಲಕರ ಸಂಘ

ಧರ್ಮಸ್ಥಳ:(ಅ.28) ನೇತ್ರಾವತಿ ಸ್ನಾನಘಟ್ಟ, ನೇತ್ರಾವತಿ ಸೇತುವೆ, ಕನ್ಯಾಡಿ ಸುತ್ತಮುತ್ತ ಪಂಚಾಯತ್ ಪರವಾನಗಿ ಪಡೆದು, ಅಧಿಕೃತ ನೋಂದಾವಣೆ ಮಾಡಿಕೊಂಡಿರುವ ಖಾಸಗಿ ಹೋಂ ಸ್ಟೇ ಮತ್ತು ವಸತಿಗೃಹಗಳ ಮಾಲಕರು ಕೆಲ ಅನಧಿಕೃತ ಹೋಂ ಸ್ಟೇ, ವಸತಿಗೃಹಗಳ ಏಜೆಂಟರ ಹಾವಳಿ ತಡೆಗಟ್ಟಬೇಕು ಎಂದು ಒತ್ತಾಯಿಸಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಗೂ ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಮನವಿ ಮಾಡಿಕೊಂಡಿದೆ‌. ಖಾಸಗಿ ವಸತಿಗೃಹ ಮಾಲಕರ ಸಂಘ ಮನವಿ ಪತ್ರವನ್ನು ಆಯಾ ವಿಭಾಗದ ಪ್ರಮುಖರಿಗೆ ನೀಡಿದರು.

ಇದನ್ನೂ ಓದಿ: ⭕ಇಂದೋರ್‌: ಹಿಂದೂ ಹೆಸರಿನಲ್ಲಿ ಯುವತಿಯರನ್ನು ಟ್ರ‍್ಯಾಪ್

ಮನವಿಯಲ್ಲಿ ಏನಿದೆ?
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಲಕ್ಷಾಂತರ ಭಕ್ತರು, ಮಂಜುನಾಥ ಸ್ವಾಮಿಯ ದರ್ಶನಕ್ಕೆ ಬರುತ್ತಿದ್ದು, ಆಗಮಿಸಿದ ಯಾತ್ರಾರ್ಥಿಗಳು ಪರಿಸರದಲ್ಲಿರುವ ಖಾಸಗಿ ಹೋಟೆಲ್ ಹಾಗೂ ವಸತಿ ಗೃಹಗಳನ್ನು ಆಶ್ರಯಿಸುತ್ತಾರೆ. ಈ ಪರಿಸರದಲ್ಲಿ ವಸತಿ ಗೃಹಗಳು ಹಾಗೂ ಹೋಂ ಸ್ಟೇಗಳು ಅಧಿಕೃತವಾಗಿ ನೋಂದಾಯಿಸಿಕೊಂಡು,

ಸ್ಥಳೀಯ ಪಂಚಾಯತ್‌ನಿಂದ ಪರವಾನಿಗೆಯನ್ನು ಪಡೆದುಕೊಂಡು ಕಾನೂನುಬದ್ಧವಾಗಿ ವ್ಯವಹಾರ ನಡೆಸಿಕೊಂಡು ಬರುತ್ತಿರುವ ವಸತಿಗೃಹಗಳ ನಡುವೆ ಕೆಲ ಅನಧಿಕೃತ ವಸತಿಗೃಹಗಳು ತಲೆ ಎತ್ತಿದ್ದು, ಇದು ವಿವಿಧ ಅವ್ಯವಹಾರಗಳಿಗೆ ಕಾರಣವಾಗಬಹುದು. ಯಾವುದೇ ಪರವಾನಗಿಯನ್ನು ಪಡೆಯದೇ, ಮೂಲಭೂತ ಸೌಕರ್ಯಗಳನ್ನು ಹೊಂದಿರದ,

ಅನಧಿಕೃತ ಕಟ್ಟಡಗಳಿಗೆ ವಸತಿ ಗೃಹಗಳ ನಾಮಫಲಕವನ್ನು ಹಾಕಿ ಯಾತ್ರಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ ಅವರಿಂದ ಹಣ ವಸೂಲು ಮಾಡಿ ವಂಚಿಸಿ ಅನ್ಯಾಯವೆಸಗುವ ದಂಧೆಗೆ ಬ್ರೇಕ್ ಹಾಕಬೇಕು. ಈ ದಂಧೆಯನ್ನು ಅನಧಿಕೃತ ವಸತಿಗೃಹಗಳ ಮತ್ತು ಹೋಂ ಸ್ಟೇಗಳ ಮಾಲೀಕರುಗಳು ಏಜೆಂಟರ ಮೂಲಕ ಕಾರ್ಯಾಚರಿಸುತ್ತಿದ್ದು, ಯಾತ್ರಾರ್ಥಿಗಳ ವಾಹನವನ್ನು ಬಸ್‌ಸ್ಟ್ಯಾಂಡ್ ಹಾಗೂ ಮಾರ್ಗ ಮಧ್ಯದಲ್ಲಿ ನಿಲ್ಲಿಸಿ, ಏಜೆಂಟ್‌ಗಳು, ಅನಧಿಕೃತ ವಸತಿ ಗೃಹಗಳನ್ನು ಅಧಿಕೃತವಾದುದೆಂದು ಬಿಂಬಿಸಿ ಎಲ್ಲಾ ಸೌಲಭ್ಯಗಳು ಅಲ್ಲಿ ದೊರೆಯುತ್ತದೆಂದು ನಂಬಿಸಿ,

ಅಲ್ಲಿಂದಲೇ ಅನಧಿಕೃತ ಲಾಡ್ಜ್‌ಗಳಿಗೆ ಕರೆದೊಯ್ದು, ಅಲ್ಲಿಯ ಮಧ್ಯಸ್ಥರೊಂದಿಗೆ ಮಾತನಾಡಿ ಕಮಿಷನ್ ಹಣವನ್ನು ಪಡೆದುಕೊಂಡು, ಯಾತ್ರಾರ್ಥಿಗಳಿಗೆ ಕೊಠಡಿ ತೋರಿಸುವುದಕ್ಕೆ ಮುಂಚೆಯೇ ಏಜೆಂಟ್‌ಗಳು ಅಲ್ಲಿಂದ ಹೊರಟು ಬಿಡುತ್ತಾರೆ. ನಂತರ ಮಾಲೀಕರು ತೋರಿಸಿದ ಬಾಡಿಗೆ ಕೋಣೆಯನ್ನು ತೋರಿಸಿದಾಗ ಅದರಲ್ಲಿರುವ ನ್ಯೂನತೆ ಹಾಗೂ ಬಾಡಿಗೆಯ ಬಗ್ಗೆ ಗ್ರಾಹಕರು ತಗಾದೆ ತೆಗೆದಾಗ, ಪ್ರತಿಯೊಂದು ವ್ಯವಸ್ಥೆಗೂ ಪ್ರತ್ಯೇಕ ಶುಲ್ಕವನ್ನು ತೆರುವಂತೆ ಒತ್ತಾಯಿಸಲಾಗುತ್ತದೆ. ಯಾತ್ರಾರ್ಥಿಗಳನ್ನು ಬೆದರಿಸಲಾಗುತ್ತದೆ ಹಾಗೂ ರಾತ್ರಿಯಲ್ಲಿ ಈ ಪ್ರದೇಶ ಅಪಾಯಕಾರಿಯಾಗಿದ್ದು, ಬೇರೆಲ್ಲೂ ಇನ್ನು ನಿಮಗೆ ವಸತಿ ಸಿಗುವುದಿಲ್ಲವೆಂದು ಸುಳ್ಳು ಬೆದರಿಕೆಯನ್ನು ನೀಡಿ ಶೋಷಣೆಗೊಳಪಡಿಸಲಾಗುತ್ತದೆ ಈ ಬಗ್ಗೆ ಭಾರಿ ಗಲಾಟೆಗಳು ನಿರಂತರವಾಗಿ ಆಗುತ್ತಿರುತ್ತದೆ.


ಈ ದಂಧೆಯಲ್ಲಿ ತೊಡಗಿದಂತಹ ಏಜೆಂಟ್‌ಗಳು, ಅಧಿಕೃತ ವಸತಿ ಗೃಹಗಳ, ದೇವಳದ ವಸತಿ ಗೃಹಗಳ ಪಕ್ಕದಲ್ಲೇ ನಿಂತುಕೊಂಡು, ಯಾತ್ರಾರ್ಥಿಗಳಿಗೆ ಸುಳ್ಳು ಮಾಹಿತಿ ಹಾಗೂ ಅಪಪ್ರಚಾರ ಮೂಲಕ ಯಾತ್ರಾರ್ಥಿಗಳನ್ನು ಪುಸಲಾಯಿಸಿ ವ್ಯವಹಾರ ಕುದುರಿಸಿಕೊಳ್ಳುವ ಪ್ರವೃತ್ತಿಯು ಇತ್ತೀಚೆಗೆ ಹೆಚ್ಚಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಧರ್ಮಸ್ಥಳದ ಖಾಸಗಿ ವಸತಿಗೃಹಗಳ ಮಾಲಕರ ಸಂಘದ ಅಧ್ಯಕ್ಷ ಸಂದೇಶ್ ರಾವ್, ಉಪಾಧ್ಯಕ್ಷ ಅಖಿಲೇಶ್ ಕುಮಾರ್ ಎಂ., ಕಾರ್ಯದರ್ಶಿ ಉದಯ್ ಡಿ., ಕೋಶಾಧಿಕಾರಿ ಸುರೇಂದ್ರ ಪ್ರಭು, ಸದಸ್ಯರಾದ ರಾಘವೇಂದ್ರ ಬೈಪಾಡಿತ್ತಾಯ, ರವಿ ಆರ್ಲ, ಅರುಣ್ ರಾವ್ ಮತ್ತಿಲ, ಪ್ರಭಾಕರ ಬೊಳ್ಮ ಮತ್ತಿತರು ಜೊತೆಗಿದ್ದರು.

Leave a Reply

Your email address will not be published. Required fields are marked *