Wed. Nov 20th, 2024

Gandibagilu: ಸಿಯೋನ್ ಆಶ್ರಮ (ರಿ.) ದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬ ಆಚರಣೆ

ಗಂಡಿಬಾಗಿಲು:(ನ.3) ಸಿಯೋನ್ ಆಶ್ರಮ ಟ್ರಸ್ಟ್ (ರಿ.). ಗಂಡಿಬಾಗಿಲು ಇಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ನೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಸಂತಿಯವರು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಇದನ್ನೂ ಓದಿ: ⭕ಹಿಂದು ಯುವತಿಗೆ ಮೆಸೇಜ್‌


ಸಭಾಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟೀಯವರಾದ ಶ್ರೀಯುತ ಡಾ.ಯು.ಸಿ.ಪೌಲೋಸ್‌ರವರು ಕನ್ನಡ ನಾಡಿನ ಸೊಬಗನ್ನು ವರ್ಣಿಸಿ, ನಮ್ಮ ನಾಡಿನಲ್ಲಿ ಯಾವುದೇ ಜಾತಿ-ಮತ, ಭೇದ-ಭಾವವಿಲ್ಲದೆ ಒಂದಾಗಿ ಬಾಳೋಣ ಹಾಗೂ ಬೆಳಕಿನ ಹಬ್ಬ ದೀಪಾವಳಿಯು ನಾಡಿನ ಸಮಸ್ತ ಜನರ ಅಂಧಕಾರದ ಕತ್ತಲೆ ಸರಿದು ಜ್ಞಾನದ ಜ್ಯೋತಿ ಮನೆ ಮನಗಳಲ್ಲಿ ಬೆಳಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗಂಡಿಬಾಗಿಲು ಸೈಂಟ್ ತೋಮಸ್ ಚರ್ಚ್‌ ನ ಧರ್ಮಗುರುಗಳಾದ ರೆ.ಫಾ.ಜೋಸ್ ಅಯಾಂಕುಡಿಯವರು, ಕನ್ನಡ ನಾಡಿನ ಸ್ವಚ್ಛಂದ ಮನೋಭಾವಗಳ ಸಂಸ್ಕೃತಿಯ ನಾಡನ್ನು ಕೊಂಡಾಡಿ, ದೀಪಾವಳಿ ಹಬ್ಬದ ಶುಭ ಹಾರೈಸಿ, ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ರಕ್ಷಿತ್ ಶಿವರಾಂರವರು ಕನ್ನಡದ ಉಗಮ, ಕನ್ನಡದ ಏಕೀಕರಣ, ನಮ್ಮ ನಾಡಿನ ಕಲೆ, ಸಂಸ್ಕೃತಿ, ಭಾಷೆ, ಪರಂಪರೆ, ಕವಿಗಳು, ಹಾಗೂ ಕನ್ನಡದ ಹಿರಿಮೆಯ ಬಗ್ಗೆ, ಸಂಕ್ಷಿಪ್ತವಾಗಿ ವಿವರಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಯವರಾದ ಶ್ರೀಯುತ ಸುರೇಂದ್ರರವರು ಮಾತನಾಡಿ, ಕರುನಾಡಿನ ಕಲೆ, ಸಾಹಿತ್ಯದ ಬಗ್ಗೆ, ಚುಟುಕಾಗಿ ವಿವರಿಸಿದರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಸಿಯೋನ್ ಆಶ್ರಮದ ಆಪ್ತ ಸಂಬಂಧವನ್ನು ವಿವರಿಸಿ, ಶುಭಾಶಯ ಕೋರಿದರು.

ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ನಮಿತಾ ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಜೀವನದಲ್ಲೂ ಬೆಳಕು ತರಲಿ ಹಾಗೂ ಕನ್ನಡದ ಕಂಪು ಎಲ್ಲೆಡೆ ಪಸರಿಸಲಿ ಎಂದರು. ಮಂಡಲ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಯುತ ನಂದಕುಮಾರ್‌ರವರು ಮಾತನಾಡಿ, ಕನ್ನಡ ಸಂಸ್ಕೃತಿ ಮತ್ತು ಕರುನಾಡ ಸೌಂದರ್ಯವನ್ನು ವರ್ಣಿಸಿ, ದೀಪಾವಳಿಯ ಶುಭಹಾರೈಸಿದರು.

ಸಂಸ್ಥೆಯ ಟ್ರಸ್ಟಿ ಸದಸ್ಯರಾದ ಶ್ರೀಮತಿ ಮೇರಿ ಯು.ಪಿ.ಯವರು, ಬೆಳ್ತಂಗಡಿ ತಾಲೂಕು ನಿವೃತ್ತ ವೈದ್ಯಾಧಿಕಾರಿಯವರಾದ ಶ್ರೀಯುತ ಡಾ.ಕಲಾಮಧುರವರು, ಸಂಸ್ಥೆಯ ವೈದ್ಯರಾದ ಶ್ರೀ ಡಾ.ಶಿವಾನಂದ ಸ್ವಾಮಿಯವರು, ಹಿತೈಷಿಗಳಾದ ಶ್ರೀಯುತ ಜೋಸೆಫ್ ಪಿ.ಪಿ.ಯವರು, ಆಶ್ರಮನಿವಾಸಿಗಳಾದ ಶ್ರೀಯುತ ಲಿಂಗರಾಜು ಮತ್ತು ಭವಾನಿ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾಕಾರ್ಯಕ್ರಮದ ನಂತರ ತೋಮಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ, ಆಶ್ರಮನಿವಾಸಿಗಳಿಂದ, ಸಿಬ್ಬಂದಿವರ್ಗದವರಿಂದ ವಿವಿಭ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸೈಂಟ್ ತೋಮಸ್ ಪ್ರೌಢಶಾಲೆಯ ಶಿಕ್ಷಕಿಯರು, ನೆರಿಯ ಗ್ರಾಮಸ್ಥರು, ಹಿತೈಷಿಗಳು, ಟ್ರಸ್ಟೀ ಕುಟುಂಬಸ್ಥರು, ಸಂಸ್ಥೆಯ ಆಡಳಿತ ಮಂಡಳಿಯವರು, ಸಿಬ್ಬಂದಿವರ್ಗದವರು, ಆಶ್ರಮನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು.

ಸಂಸ್ಥೆಯ ಸಿಬ್ಬಂದಿಯವರಾದ ಶ್ರೀಮತಿ ದಿನವತಿಯವರು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವೈದ್ಯರಾದ ಶ್ರೀಯುತ ಡಾ.ಶಿವಾನಂದ ಸ್ವಾಮಿಯವರು ಸ್ವಾಗತಿಸಿ, ಸಿಬ್ಬಂದಿ ಶ್ರೀಮತಿ ಸಿಂಧು ವಿ,ಜೆ.ಯವರು ಧನ್ಯವಾದ ಸಲ್ಲಿಸಿದರು.

Leave a Reply

Your email address will not be published. Required fields are marked *