ಬಂಟ್ವಾಳ :(ನ.5) ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕ ವತಿಯಿಂದ ನಡೆಯುವ ಬಂಟ್ವಾಳ ತಾಲೂಕು 18 ನೇ ಮಕ್ಕಳ ಸಾಹಿತ್ಯ ಸಮ್ಮೇಳನವು ಶಂಭೂರು ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ
ಇದನ್ನೂ ಓದಿ: ⭕ಮಂಗಳೂರು: ಎಡನೀರು ಶ್ರೀಗಳ ವಾಹನಕ್ಕೆ ಅಡ್ಡಿ
ನಿರ್ಮಿಸಲಾಗುವ ರಾಮಚಂದ್ರ ರಾವ್ ಸಭಾಂಗಣದ ವಿ.ಮ ಭಟ್ ವೇದಿಕೆಯಲ್ಲಿ ದಿನಾಂಕ 19-11- 2024 ರಂದು ನಡೆಯಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆತಿಥೇಯ ಸಂಸ್ಥೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕುಮಾರಿ ಪ್ರೇಕ್ಷಾ ಆಯ್ಕೆಯಾಗಿರುತ್ತಾರೆ ಎಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಹೇಮಚಂದ್ರ ಭಂಡಾರದ ಮನೆ ಮತ್ತು ಪ್ರಧಾನ ಕಾರ್ಯದರ್ಶಿ ಜಯರಾಮ ಡಿ ಪಡ್ರೆ ಜಂಟಿ ಹೇಳಿಕೆ ನೀಡಿದ್ದಾರೆ.
ಪ್ರೇಕ್ಷಾ ಇವರು ಶಂಭೂರು ಗ್ರಾಮದ ಸೀನೆರೆ ಪಾಲು ಮೋಹಿನಿ ಮತ್ತು ಸುಣ್ಣಾಜೆ ದಿನೇಶ್ ರವರ ದ್ವಿತೀಯ ಪುತ್ರಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಉಪ್ಪಿನಂಗಡಿಯ ನಟ್ಟಿಬೈಲು ವೇದಶಂಕರ ನಗರದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಿರುವರು. ಪ್ರಸ್ತುತ ಶಂಭೂರು ಶಾಲೆಯಲ್ಲಿ ಐದನೇ ತರಗತಿಯಿಂದ ಕಲಿಕೆ ಮುಂದುವರಿಸುತ್ತಿದ್ದಾರೆ.
ಕಲಿಕೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಇವರು ಯಕ್ಷಗಾನದಲ್ಲಿಯೂ ವೇಷ ಮಾಡಿದ ಅನುಭವ ಗಳಿಸಿದ್ದಾರೆ. ಭಕ್ತಿಗೀತೆ ಮತ್ತು ದೇಶಭಕ್ತಿ ಗೀತೆಗಳ ಗಾಯನ ಇವರ ಮೆಚ್ಚಿನ ಹವ್ಯಾಸ. ಪ್ರತಿಭಾ ಕಾರಂಜಿಯ ಕವನ ವಾಚನ ಸ್ಪರ್ಧೇಯಲ್ಲಿ ಭಾಗವಹಿಸಿ ಕಳೆದೆರಡು ವರ್ಷಗಳಿಂದ ಬಹುಮಾನಿತರಾಗುತ್ತಿದ್ದಾರೆ. ಇವರು ಶಂಭೂರು ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ.
ಕಡೆಶಿವಾಲಯದಲ್ಲಿ ಜರಗಿದ 17ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಇವರು ಸ್ವರಚಿಸಿದ ಕವನ “ಬೆಳೆಸಿ ಉಳಿಸಿ” ಕವನವು ಆ ವರ್ಷದ ಸ್ಮರಣ ಸಂಚಿಕೆ “ಲಹರಿ” ಯಲ್ಲಿ ಪ್ರಕಟವಾಗಿರುವುದು ಹೆಮ್ಮೆಯ ಸಂಗತಿ ಮತ್ತು ಸಹಪಾಠಿಗಳಿಗೆ ಪ್ರೇರಣೆ. ಶಾಲಾ ಪ್ರತಿಭಾ ದಿನೋತ್ಸವ, ಕ್ರೀಡಾ ಕೂಟಗಳಲ್ಲಿ ಇವರು ತನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಬಹುಮಾನ ಪಡೆಯುತ್ತಿರುವ ಸಾಧನಾ ಮುಖಿ. ಸಾಹಿತ್ಯದಲ್ಲಿ ಬೆಳೆಯಬೇಕಂಬ ಹಂಬಲ ಪ್ರೇಕ್ಷಾ ಅವರಿಗಿದೆ.
ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ರಮೇಶ ಎಂ ಬಾಯಾರು, ಕಾರ್ಯದರ್ಶಿ ಪುಷ್ಪಾ ಎಚ್ ಇವರು ಕು. ಪ್ರೇಕ್ಷಾ ಇವರನ್ನು ಅಭಿನಂದಿಸಿದ್ದು ಅವರ ಸರ್ವಾಧ್ಯಕ್ಷತೆಯಲ್ಲಿ ಶಂಭೂರಿನಲ್ಲಿ ಜರಗುವ ತಾಲೂಕು ಮಟ್ಟದ ಮಕ್ಕಳ ಹದಿನೆಂಟನೇ ಸಾಹಿತ್ಯ ಸಮ್ಮೇಳನವು ಯಶಸ್ಸುಗಳಿಸಲಿ ಎಂದು ಹಾರೈಸಿದ್ದಾರೆ.