ಕೊಕ್ಕಡ:(ನ.6) ಸುಪ್ರಸಿದ್ಧ ಸೌತಡ್ಕ ಮಹಾಗಣಪತಿ ದೇವಸ್ಥಾನದ ಜಾಗ ಮತ್ತು ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಶ್ರೀಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ನ.5ರಂದು ಗಂಭೀರ ಆರೋಪ ಮಾಡಿದೆ. ಈ ದೇವಸ್ಥಾನ ಬಯಲು ಆಲಯ ಗಣಪನೆಂದೇ ಪ್ರಸಿದ್ಧಿ ಪಡೆದಿದೆ. ಸೌತಡ್ಕ ಮಹಾಗಣಪತಿ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದೆ.
ಇದನ್ನೂ ಓದಿ: ⁉ಮೈಸೂರು: ಮುಡಾ ಹಗರಣ – 2 ಗಂಟೆ ವಿಚಾರಣೆ ಬಳಿಕ ಸಿದ್ದರಾಮಯ್ಯ ಏನಂದ್ರು..?
ದೇವಸ್ಥಾನದಲ್ಲಿನ ಅವ್ಯವಹಾರಗಳ ಸಮಗ್ರ ತನಿಖೆಗೆ ಒತ್ತಾಯಿಸಿ ನ.11ರಿಂದ ಅನಿರ್ಧಿಷ್ಟ ಧರಣಿ ನಡೆಸಲು ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ನಿರ್ಧರಿಸಿದೆ. ದೇವಸ್ಥಾನದ ಹೆಸರಿನಲ್ಲಿ ಖರೀದಿಸಿದ ಸ್ಥಿರಾಸ್ತಿ ದೇವಸ್ಥಾನದ ಹೆಸರಿಗೆ ಬರೆಸಬೇಕು. ಖಾಸಗಿಯಾಗಿ ರಚಿಸಿರುವ ಟ್ರಸ್ಟ್ನ್ನು ರದ್ದುಪಡಿಸಿ ಅದರ ಆಸ್ತಿಯನ್ನು ದೇವಸ್ಥಾನಕ್ಕೆ ಹಸ್ತಾಂತರಿಸಬೇಕು. ಆದಾಯ ನೇರವಾಗಿ ದೇವಸ್ಥಾನದ ಖಜಾನೆಗೆ ಸೇರಬೇಕು. ಜಾಗವನ್ನು ದಾನಪತ್ರದ ಮೂಲಕ ಖಾಸಗಿ ಸಂಸ್ಥೆಗೆ ಹಸ್ತಾಂತರ ಮಾಡುವುದಕ್ಕೆ ತಡೆ ನೀಡಬೇಕು ಎಂದು ಸಂಘಟನೆ ಆಗ್ರಹಿಸಲಿದೆ.
ಭಕ್ತರ ವಾಹನಗಳ ಪಾರ್ಕಿಂಗ್, ಪೂಜಾ ಸಾಮಾಗ್ರಿಗಳ ಅಂಗಡಿ, ವಸತಿಗೃಹ ನಿರ್ಮಾಣಕ್ಕಾಗಿ 2004ರಲ್ಲಿ 3.46 ಎಕರೆ ಜಮೀನು ಖರೀದಿಸಲಾಗಿದೆ. ದೇವಸ್ಥಾನದಲ್ಲಿ ಹಣ ಇಲ್ಲದ ಕಾರಣ ಆಡಳಿತ ಮಂಡಳಿಯವರಿಂದಲೇ ಜಾಗ ಖರೀದಿ ಮಾಡಲಾಗಿದೆ. ತಮ್ಮ ಖಾಸಗಿ ಜಾಗ ಅಡವಿಟ್ಟು, ಈ ಜಾಗವನ್ನು ಮೂವರು ಖರೀದಿ ಮಾಡಿದ್ದರು. ಈ ಜಮೀನು ಮೂವರ ಹೆಸರಿನಲ್ಲೇ ನೋಂದಣಿಯಾಗಿತ್ತು.
ವರ್ಷದ ಬಳಿಕ ಭಕ್ತರ ದೇಣಿಗೆಯಿಂದ ಅವರ ಹಣವನ್ನು ದೇವಸ್ಥಾನ ಹಿಂದುರುಗಿಸಿತ್ತು. ಆದರೆ, ಆ ಬಳಿಕ ಭೂಮಿಯನ್ನು ದೇವಸ್ಥಾನದ ಹೆಸರಿಗೆ ಮಾಡಲು ಕಾನೂನು ತೊಡಕು ಎದುರಾಗಿದೆ. ಕೃಷಿ ಭೂಮಿಯಾದ ಕಾರಣ ದೇವಸ್ಥಾನದ ಹೆಸರಿಗೆ ಮಾಡಲು ಕಾನೂನು ತೊಂದರೆ ಉಂಟಾಗಿದೆ ಎಂದು ಹೇಳಲಾಗಿದೆ.
ಆಗ, ಆಡಳಿತ ಮಂಡಳಿಯಿಂದ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಎಂಬ ಟ್ರಸ್ಟ್ ಆರಂಭಿಸಿತು. ಸದ್ಯ ವಾಣಿಜ್ಯ ಕಟ್ಟಡದ ಬಾಡಿಗೆ, ವಸತಿಗೃಹದ ಬಾಡಿಗೆ ಸೇರಿ ಕೋಟಿ ಗಟ್ಟಲೆ ಹಣ ಟ್ರಸ್ಟ್ಗೆ ಬರುತ್ತಿದೆ. ಆದರೆ, ದೇವಸ್ಥಾನದ ಹೆಸರಿನಲ್ಲಿ ಬರುತ್ತಿರುವ ಆದಾಯ ಖಾಸಗಿಯವರ ಪಾಲಾಗುತ್ತಿದೆ. ಈ ನಡುವೆ ದೇವಸ್ಥಾನದ ಹೆಸರಿನಲ್ಲಿ ಖರೀದಿಸಿದ ಭೂಮಿಯನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ಗಿಫ್ಟ್ ಡಿಡಿ ನೀಡಲು ನಿರ್ಧರಿಸಲಾಗಿದೆ. ಜಮೀನು ದೇವಸ್ಥಾನದ ಹೆಸರಿಗೆ ನೋಂದಣಿ ಆಗದ ಕಾರಣ ಖಾಸಗಿ ವ್ಯಕ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಜಾಗ, ಆದಾಯ ದೇವಸ್ಥಾನದ ಖಜಾನೆಗೆ ಸೇರುವಂತೆ ಮಾಡಲು ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಿದೆ.