ಬೆಳ್ತಂಗಡಿ :(ನ.7) ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಮಹಾಗಣಪತಿ ದೇವಸ್ಥಾನದ ಆಸ್ತಿ ವಿವಾದ ತಾರಕಕ್ಕೇರುತ್ತಿದೆ.
ಸೌತಡ್ಕ ಮಹಾಗಣಪತಿ ಸೇವಾ ಟ್ರಸ್ಟ್ ದೇವಸ್ಥಾನದ ಜಮೀನನ್ನು ತನ್ನ ವಶದಲ್ಲಿ ಇಟ್ಟುಕೊಂಡು ಅದರಿಂದ ಬರುತ್ತಿರುವ ಆದಾಯವನ್ನು ಬಳಕೆ ಮಾಡುತ್ತಿದೆ ಇದರಿಂದ ದೇವಸ್ಥಾನಕ್ಕೆ ನಷ್ಟವಾಗುತ್ತಿದೆ ಎಂದು ಸೌತಡ್ಕ ಮಹಾಗಣಪತಿ ಸಂರಕ್ಷಣಾ ವೇದಿಕೆ ಆರೋಪಿಸಿತ್ತು.
ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸೌತಡ್ಕ ಮಹಾಗಣಪತಿ ಟ್ರಸ್ಟ್ ಆರೋಪಗಳನ್ನು ತಳ್ಳಿ ಹಾಕಿದೆ. ಅಲ್ಲದೇ ಇದಕ್ಕೆ ಸ್ಪಷ್ಟೀಕರಣ ಕೊಟ್ಟಿರುವ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್, ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿಯಿಂದ ಈ ಜಾಗವನ್ನು ಖರೀದಿಸಲಾಗಿತ್ತು.
ಮೂರು ಮಂದಿ ಅಂದು ಸೇವಾ ಮನೋಭಾವದಿಂದ ಜಮೀನು ಖರೀದಿಸಿದ್ದರು. ನಂತರ ಈ ಮೂರು ಮಂದಿ ಈ ಜಾಗವನ್ನು ದಾನದ ರೂಪದಲ್ಲಿ 2009ರಲ್ಲಿ ಸೌತಡ್ಕ ಮಹಾಗಣಪತಿ ಸೇವಾ ಟ್ರಸ್ಟ್ ಗೆ ನೀಡಿದ್ದರು. ಈ ಮೂವರು ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ನೀಡುತ್ತೇವೆ ಎಂದು ಯಾವುದೇ ದಾಖಲೆ ಮತ್ತು ಉಲ್ಲೇಖ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಟ್ರಸ್ಟ್ ನ ಹಣ ದಿಂದ ಸಾಲ ಪಾವತಿ…!:
ಜಮೀನಿನ ಸಾಲವನ್ನು ದೇವಸ್ಥಾನದ ಹುಂಡಿ ಮತ್ತು ದಾನಿಗಳ ಹಣದಿಂದ ಮರುಪಾವತಿ ಮಾಡಲಾಗಿದೆ ಎಂದು ಸೌತಡ್ಕ ಮಹಾಗಣಪತಿ ಸಂರಕ್ಷಣಾ ವೇದಿಕೆ ಆರೋಪಿಸಿದೆ. ಇದು ಸತ್ಯಕ್ಕೆ ದೂರವಾದದ್ದು. 2009ರಲ್ಲಿ ಅಸ್ತಿತ್ವಕ್ಕೆ ಬಂದ ಸೌತಡ್ಕ ಮಹಾಗಣಪತಿ ಸೇವಾ ಟ್ರಸ್ಟ್, ದಾನದ ಮೂಲಕ ಈ ಜಾಗವನ್ನು ಪಡೆದ ಬಳಿಕ ಅದಕ್ಕಿದ್ದ ಸಾಲವನ್ನು ಸಂಪೂರ್ಣವಾಗಿ ಟ್ರಸ್ಟ್ ಭರಿಸಿದೆ. ದೇವಸ್ಥಾನದ ಹುಂಡಿಯಿಂದ ಅಥವಾ ಭಕ್ತರಿಂದ ಪಡೆದ ಹಣದಿಂದ ಅಲ್ಲ ಎಂದು ತಿಳಿಸಿದ್ದಾರೆ. ಹುಂಡಿಯಿಂದ ತೆಗೆದು ಸಾಲ ಪಾವತಿ ಮಾಡಿದಕ್ಕೆ ಯಾವುದೇ ಪುರಾವೆ ಇದ್ದರು ನೀಡಲಿ ಎಂದರು.
ಸೇವಾ ಟ್ರಸ್ಟ್ ಕಾನೂನು ಬಾಹಿರವಲ್ಲ..!:
ಕೊಕ್ಕಡ ಭಾಗದಲ್ಲಿ ಸಾಮಾಜಿಕವಾಗಿ ಜನರಿಗೆ ನೆರವಾಗುವ ಉದ್ದೇಶದಿಂದ ಟ್ರಸ್ಟ್ ನಿರ್ಮಾಣ ಮಾಡಲಾಗಿದೆ. ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೂ ಸೌತಡ್ಕ ಮಹಾಗಣಪತಿ ಸೇವಾ ಟ್ರಸ್ಟ್ ಗೂ ಯಾವುದೇ ಸಂಬಂಧವಿಲ್ಲ. ನಾವು ಯಾವುದೇ ದೇಣಿಗೆಯನ್ನು ಭಕ್ತರಿಂದ ಪಡೆದುಕೊಂಡಿಲ್ಲ.
ಜಮೀನಿನಿಂದ ಬಂರುವ ಆದಾಯದಿಂದ ಸಾಮಾಜಿಕ ಕೆಲಸವನ್ನು ಮಾಡುತ್ತಿದ್ದೇವೆ. ಅಲ್ಲದೇ ನಮ್ಮಲ್ಲಿರುವ ಜಮೀನಿನಲ್ಲಿ ಸೇವಾಧಾಮದಂತಹ ಸೇವ ಸಂಘಟನೆಗೆ ಕಟ್ಟಡ ಉಚಿತವಾಗಿ ಕೊಟ್ಟಿದ್ದೇವೆ. ಅಧಿಕಾರಿಗಳಿಗೆ ಉಳಿದುಕೊಳ್ಳಲು ವಸತಿ ಗೃಹ ಕೂಡ ನಿರ್ಮಿಸಿಕೊಟ್ಟಿದ್ದೇವೆ. ದೇವಸ್ಥಾನಕ್ಕೂ ಅನೇಕ ಸಹಾಯಗಳನ್ನು ಮಾಡಿದ್ದೇವೆ.
ವಿದ್ಯಾವರ್ಧಕ ಸಂಘ ಜಾಗ ವಾಪಸ್ ಕೊಟ್ಟಿದೆ:
ಮೂರು ಜಾಗಗಳ ಪೈಕಿ ಒಂದು ಜಾಗ ರಾಘವ ಕೊಲ್ಲಾಜೆಯವರದ್ದು. ಅವರು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ದಾನದ ರೂಪದಲ್ಲಿ ಜಾಗ ಕೊಟ್ಟಿದ್ದರು. ಆದರೆ ಈಗ ಮತ್ತೆ ವಿದ್ಯಾವರ್ಧಕ ಸಂಘ ಆ ಜಾಗವನ್ನು ವಾಪಸ್ ಕೊಟ್ಟಿದೆ. ಈಗ ಆ ಜಾಗ ಟ್ರಸ್ಟ್ ಬಳಿ ಎಂದು ಸ್ಪಷ್ಟೀಕರಣವನ್ನು ಸೌತಡ್ಕ ಮಹಾಗಣಪತಿ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ನೀಡಿದ್ದಾರೆ.