ಪುತ್ತೂರು:(ನ.13) ಅಪ್ರಾಪ್ತ ಬಾಲಕಿಯ ಜೊತೆಗೆ ಅನುಚಿತವಾಗಿ ವರ್ತಿಸಿದ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಅಪರಾಧಿಗೆ ಪೋಕ್ಸೋ ಕಾಯ್ದೆಯಡಿ 3 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.20 ಸಾವಿರ ದಂಡ ವಿಧಿಸಿದೆ.
ಇದನ್ನೂ ಓದಿ: ⭕ಸುಳ್ಯ: ವ್ಯಾಪಾರ ವ್ಯವಹಾರದಲ್ಲಿ ಮೋಸ!!
ದಂಡ ತೆರಲು ತಪ್ಪಿದಲ್ಲಿ ಮತ್ತೆ 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶೆ ಸರಿತಾ ಡಿ ಅವರು ತೀರ್ಪು ನೀಡಿದ್ದಾರೆ. ಕಬಕ ಗ್ರಾಮದ ವಿದ್ಯಾಪುರ ನಿವಾಸಿ ಮಹಮ್ಮದ್ ಮುಸ್ತಾಫ ಯಾನೆ ಮುಸ್ತಾಫ ಶೇಖ್ ಶಿಕ್ಷೆಗೆ ಗುರಿಯಾದ ಅಪರಾಧಿ.
ಮುಸ್ತಾಫ ಶೇಖ್ 2015ರ ಡಿಸೆಂಬರ್ 4ರಂದು ಕಬಕ ಗ್ರಾಮದ ಬೈಪದವು ಎಂಬಲ್ಲಿ ಅಂಗಡಿಗೆಂದು ಕಾಲುದಾರಿಯಲ್ಲಿ ಬರುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕೈ ಹಿಡಿದು ಎಳೆದು ತಬ್ಬಿಕೊಂಡು ಮುತ್ತು ಕೊಡಲು ಮುಂದಾದ ಸಂದರ್ಭದಲ್ಲಿ ಬಾಲಕಿ ಆತನನ್ನು ದೂಡಿ ತಪ್ಪಿಸಿಕೊಂಡು ಬಂದು ಬೊಬ್ಬೆ ಹೊಡೆದಿದ್ದರು.
ಬೊಬ್ಬೆ ಕೇಳಿ ಕೆಲವರು ಅಲ್ಲಿಗೆ ಬಂದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಬಾಲಕಿ ಘಟನೆ ಕುರಿತು ಮನೆಯವರಲ್ಲಿ ವಿಷಯ ತಿಳಿಸಿದ್ದು ಆಕೆಯ ತಾಯಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಠಾಣೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಒಟ್ಟು 14 ಮಂದಿ ಸಾಕ್ಷಿದಾರರನ್ನು ವಿಚಾರಿಸಿದರು. ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ ಭಾರತೀಯ ದಂಡ ಸಂಹಿತೆ ಕಲಂ 341 ರಡಿಯ ಅಪರಾಧಕ್ಕೆ 1 ತಿಂಗಳ ಸಾದಾ ಶಿಕ್ಷೆ ಮತ್ತು 500ರೂ ದಂಡ, ದಂಡ ತೆರಲು ತಪ್ಪಿದಲ್ಲಿ 1 ವಾರ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕು,ಭಾ.ದಂ.ಸಂ. ಕಲಂ 354ರಡಿಯ ಅಪರಾಧ ಮತ್ತು ಪೊಕ್ಕೋ ಕಾಯ್ದೆಯ ಅಪರಾಧಕ್ಕೆ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 20,000 ರೂ.ದಂಡ ವಿಧಿಸಿದ್ದಾರೆ.ದಂಡ ತೆರಲು ತಪ್ಪಿದಲ್ಲಿ ಮತ್ತೆ 6 ತಿಂಗಳ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದ್ದಾರೆ.
ದಂಡದ ಮೊತ್ತದಲ್ಲಿ ರೂ.15 ಸಾವಿರವನ್ನು ಬಾಲಕಿಗೆ ಪರಿಹಾರದ ರೂಪದಲ್ಲಿ ನೀಡಬೇಕೆಂದು ಆದೇಶಿಸಿದ್ದಾರೆ.