ರಾಮನಗರ :(ನ.16) ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹೊಸ ಹೊಸ ಯೋಜನೆಗಳನ್ನು ಗ್ರಾಮೀಣ ಭಾಗದ ಬಡಜನರಿಗೆ ತಲುಪಿಸುವ ಗ್ರಾಮ ಪಂಚಾಯಿತಿ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಒತ್ತಾಯಿಸಿ ನವಂಬರ್ 27ರಂದು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘ ರಿ (ಆರ್ ಡಿ ಪಿ ಆರ್) ರಾಜ್ಯಾಧ್ಯಕ್ಷ ಡಾ. ದೇವಿ ಪ್ರಸಾದ್ ಬೊಲ್ಮಾ ತಿಳಿಸಿದರು.
ಇದನ್ನೂ ಓದಿ: ⁉⭕ಹುಬ್ಬಳ್ಳಿ: ಇನ್ಮುಂದೆ ಪುರುಷರಿಗೂ ಉಚಿತ ಬಸ್ ಪ್ರಯಾಣ?!
ರಾಮನಗರ ಬಿಡದಿಯ ಶಾನು ಮಂಗಳ ರಸ್ತೆಯಲ್ಲಿರುವ ಖಾಸಗಿ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯಿತಿ ನೌಕರರ ರಾಜ್ಯಮಟ್ಟದ ಸಮಾಲೋಚನ ಸಭೆಯಲ್ಲಿ ಮಾತನಾಡಿ ಕಳೆದ ಮೂರು ದಶಕಗಳಿಂದ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಬಿಲ್ ಕಲೆಕ್ಟರ್ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಅಟೆಂಡರ್, ಡಾಟಾ ಎಂಟ್ರಿ ಆಪರೇಟರ್, ವಾಟರ್ ಮ್ಯಾನ್ ಹಾಗೂ ಸ್ವಚ್ಛತೆಗಾರ ವೃಂದದಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿರುವ ನೌಕರರು ಸರಕಾರದ ಸವಲತ್ತುಗಳನ್ನು ಗ್ರಾಮೀಣ ಜನರ ಮನೆ ಬಾಗಿಲಿಗೆ ತಲುಪಿಸುವ ನೌಕರರು ಕಳೆದ ಮೂರು ದಶಕಗಳಿಂದ ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿಗಳಲ್ಲಿ ಇತರ ಅಧಿಕಾರಿಗಳಿಗೆ ಸರಿ ಸಮಾನವಾದ ವಿದ್ಯಾರ್ಹತೆಯನ್ನು ಹೊಂದಿರುವ ನೌಕರರು ಗ್ರಾಮ ಪಂಚಾಯತ ಆರ್ಥಿಕ ಸಂಪನ್ಮೂಲ ಕ್ರೂಡೀಕರಣ, ತಂತ್ರಾಂಶ ಸೇವೆ, ಮೂಲಭೂತ ಸೌಕರ್ಯ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ಇತರ ಇಲಾಖೆಗಳಿಂದ ನಿರ್ವಹಿಸುವ ಹೆಚ್ಚುವರಿ ತುರ್ತು ಸೇವೆಗಳನ್ನು ಸೇರಿದಂತೆ ಪ್ರತಿಯೊಂದು ರಲ್ಲಿ ಮುಂಚೂಣಿಯಲ್ಲಿರುವ ನೌಕರರು ಕನಿಷ್ಠ ವೇತನಕ್ಕೆ ಗರಿಷ್ಠ ಸೇವೆ ಸಲ್ಲಿಸುತ್ತಿದ್ದಾರೆ, ಹುದ್ದೆಗೆ ಸರಿಸಮಾನವಾದ ವೇತನ ಶ್ರೇಣಿ ನಿಗದಿಪಡಿಸಿಲ್ಲ ಹಗಲಿರುಳು ದುಡಿದರು ಆರೋಗ್ಯ ಭದ್ರತೆ ಹಾಗೂ ಸೇವಾ ಭದ್ರತೆ ಇರುವುದಿಲ್ಲ, ನಿವೃತ್ತಿ ಜೀವನಕ್ಕೂ ಸರಿಯಾದ ಆರ್ಥಿಕ ಭದ್ರತೆ ಇರುವುದಿಲ್ಲ, ನೌಕರರ ಬೇಡಿಕೆ ಸಮಸ್ಯೆಗಳ ಕುರಿತು ಇಲಾಖೆ ಅಸಡ್ಡೆಯಿಂದ ಕಾಣುತ್ತಿದ್ದು ನೈಜ ವರದಿಯನ್ನು ಸರಕಾರಕ್ಕೆ ಸಲ್ಲಿಸದೆ ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕ ಇಲಾಖೆ ಕಾಲಕಾಲಕ್ಕೆ ನಿಗದಿ ಪಡಿಸಿದ ಕನಿಷ್ಠ ವೇತನವನ್ನು ಪ್ರಸ್ತುತ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ನೀಡಲಾಗುತ್ತಿದೆ. ಇದರಿಂದ ಹತ್ತು ಇಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸಿದ ನೌಕರನಿಗೂ ಇತ್ತೀಚೆಗೆ ಸೇವೆಗೆ ಸೇರಿದ ನೌಕರನಿಗೂ ಒಂದೇ ರೀತಿಯ ವೇತನ ಲಭಿಸಿ ಸೇವಾ ಹಿರಿತನದ ಪಂಚಾಯಿತಿ ಸಿಬ್ಬಂದಿಗಳಿಗೆ ಅನ್ಯಾಯವಾಗಿರುತ್ತದೆ ಇದನ್ನು ತ್ವರಿತವಾಗಿ ಸರಿಪಡಿಸಬೇಕು ಎಂದರು. 1994ರ ಸರಕಾರಿ ಆದೇಶದಲ್ಲಿ ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ಶ್ರೇಣಿ ನಿಗದಿ ಪಡಿಸಬಹುದು ಎಂದು ಆದೇಶವಿದ್ದರೂ ಹಾಗೂ ಪಂಚಾಯತ್ ರಾಜ್ ಅಧಿನಿಯಮದಲ್ಲಿ ಸಿಬ್ಬಂದಿ ಸ್ವರೂಪ ವೇತನ ಶ್ರೇಣಿ ನೀಡಬಹುದು ಎಂದು ಇದ್ದರೂ ಕೂಡ ಕಾರ್ಯರೂಪಕ್ಕೆ ಬರುತ್ತಿಲ್ಲ, 2019ರ ಸರಕಾರದ ಸುತ್ತೋಲೆಯಲ್ಲಿ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸಿ ಮತ್ತು ಡಿ ದರ್ಜೆ ನಿಗದಿಪಡಿಸಿದೆ ಎಂದು ಉಲ್ಲೇಖಿಸಲಾಗಿದೆ.
ಗ್ರಾಮ ಪಂಚಾಯಿತಿ ನೌಕರರಿಗೆ ಸೇವಾ ನಿಯಮಾವಳಿ ರೂಪಿಸಿದಂತೆ ಅದಕ್ಕೆ ಸರಿಯಾಗಿ ಸರಕಾರ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ನೌಕರರಿಗೆ ಸರಿಸಮನವಾದ ವೇತನಶ್ರೇಣಿ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ಪರಿಷ್ಕರಣೆಗೆ 1954 ಕೋಟಿ ರೂಗಳ ಮಾತ್ರ ಅಗತ್ಯವಿದೆ. ಆದರೆ 50ಸಾವಿರ ಕೋಟಿ ಬೇಕು ಎಂದು ಸರಕಾರಕ್ಕೆ ದಿಕ್ಕು ತಪ್ಪಿಸಲಾಗುತ್ತಿದೆ. ಇಲಾಖೆಯಲ್ಲಿ ನಾನಾ ಅನುದಾನ ಯೋಜನೆಗಳ ಅಡಿಯಲ್ಲಿ ಸುಮಾರು 1650 ಕೋಟಿ ರೂ ಭದ್ರತಾ ನಿಧಿಯ ಅನುದಾನ ಲಭ್ಯವಿದೆ.
ಸರಕಾರ ವಾರ್ಷಿಕ ಸುಮಾರು 350 ಕೋಟಿ ರೂ ನೀಡಿದರೆ ನೌಕರರ ಉದ್ಯೋಗ ಭದ್ರತೆ ಸಮಸ್ಯೆ ಬಗೆಹರಿಯಲಿದೆ. ನ್ಯಾಯಯುತ ಹೋರಾಟದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ನೌಕರರು ಭಾಗವಹಿಸಿ ಬದಲಾವಣೆ ತರಲು ಕೈಜೋಡಿಸಬೇಕು ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ನೌಕರರ ಬೇಡಿಕೆ ಈಡೇರಿಕೆಗೆ ಹೋರಾಟದ ಅಗತ್ಯವಿದ್ದು ರಾಜ್ಯಮಟ್ಟದ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ 48 ಸಾವಿರ ಜನ ಗ್ರಾಮ ಪಂಚಾಯಿತಿ ನೌಕರರಿದ್ದು. ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
ಇದೆ ವೇಳೆ ರಾಮನಗರ ಜಿಲ್ಲೆಯ ನಾನಾ ಗ್ರಾಮ ಪಂಚಾಯಿತಿ ನೌಕರರು ತಮ್ಮ ಸಮಸ್ಯೆಗಳು ಹಾಗೂ ಅಭಿಪ್ರಾಯಗಳನ್ನು ಸಭೆಯ ಗಮನಕ್ಕೆ ತಂದರು. ಮಂಚನಾಯಕನಹಳ್ಳಿ ಗ್ರಾಮ ಪಂಚಾಯತ್ ನೌಕರ ಶ್ರೀ ಮಾರಪ್ಪ ಸಭೆಯ ನೇತೃತ್ವ ವಹಿಸಿದ್ದರು. ರಾಮನಗರ ಜಿಲ್ಲೆಯ ಸಂಚಾಲಕರ ತಂಡವನ್ನು ರಚನೆ ಮಾಡಲಾಯಿತು.
ಸಂಚಾಲಕರುಗಳಾಗಿ ಶ್ರೀ ಭೈರಮುಡಿ ಗೌಡ ಕನಕಪುರ, ಶ್ರೀ ಮಾರಯ್ಯ ರಾಮನಗರ, ಶ್ರೀ ಮುನಿ ನಿಂಗೇಗೌಡ ಕನಕಪುರ, ಶ್ರೀ ಅರುಣ್ ಕುಮಾರ್ ಆರೋರು, ಶ್ರೀ ಸೋಮೇಶ್ ರಾಮನಗರ, ಶ್ರೀ ಶಿವಕುಮಾರ್ ಮಾಗಡಿ, ಶ್ರೀ ಕಿರಣ್ ಕುಮಾರ್ ಮಾಗಡಿ, ಶ್ರೀ ಪ್ರಕಾಶ್ ರಾಮನಗರ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಚಾಲಕರಾದ ಸತೀಶ್ ನಾರಾವಿ, ಶ್ರೀ ದಿನೇಶ್ ಮಾಗಡಿ, ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಹೇಮಚಂದ್ರ ನಂದಳಿಕೆ, ಬೆಳ್ತಂಗಡಿಯ ಸಂಚಾಲಕರಾದ ಶ್ರೀ ವೀರಪ್ಪ, ಬೈರಮಂಗಲ ಶ್ರೀ ಮುನಿರಾಮ ಸ್ವಾಮಿ ಕನಕಪುರ, ಶ್ರೀ ಭೈರಮುಡಿ ಗೌಡ, ಶ್ರೀ ಮಾರಣ್ಣ ಮುಂತಾದವರು ಉಪಸ್ಥಿತರಿದ್ದರು.