ಬೆಳ್ತಂಗಡಿ :(ಆ.14) ಮದುವೆಯಾಗದೆ ಅಕಾಲಿಕವಾಗಿ ಮೃತಪಟ್ಟವರ ಪ್ರೇತಾತ್ಮಕ್ಕೆ ನಡೆಯುವ ಕುಲೆ ಮದುವೆ ತುಳುವರಿಗೆ ಚಿರಪರಿಚಿತ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಲೆ ಮದುವೆ ಆಟಿಯಲ್ಲಿ ನಡೆಯುವುದು ಸಂಪ್ರದಾಯ. ಬೆಳ್ತಂಗಡಿಯಲ್ಲಿ ಕುಲೆ ಮದುವೆ ನಡೆದಿದೆ.
ಇದನ್ನೂ ಓದಿ: 🔴ಬೆಳ್ತಂಗಡಿ: ರಕ್ಷಿತ್ ಶಿವರಾಂ ರನ್ನು ಭೇಟಿಯಾದ ದ.ಕ.ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು
ವೇಣೂರು ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ ಧರ್ಮದರ್ಶಿ ರಮೇಶ್ ಅವರ ಪೌರೋಹಿತ್ಯದಲ್ಲಿ ನಡೆದ ಪ್ರೇತಗಳ ಮದುವೆಗೆ ಸುಮಾರು ನೂರಕ್ಕೂ ಹೆಚ್ಚು ಮಂದಿ ಸಾಕ್ಷಿಗಳಾಗಿದ್ದರು. 35 ವರ್ಷಗಳ ಹಿಂದೆ ಅಕಾಲಿಕವಾಗಿ ಮೃತಪಟ್ಟ ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳ ಪ್ರೇತಾತ್ಮಕ್ಕೆ ಮದುವೆ ನೆರವೇರಿಸಲಾಯಿತು.
ಬೆಳ್ತಂಗಡಿ ತಾಲೂಕಿನ ಶಾರದಾ ಎಂಬ ವಧು ಹಾಗೂ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಸದಾಶಿವ ಎಂಬ ವರನ ಕುಟುಂಬದ ನಡುವೆ ಮದುವೆ ನಡೆದರೆ, ಇನ್ನೊಂದು ಜಾರಗುಡ್ಡೆಯ ಯಾದವ ಹಾಗೂ ಬಂಟ್ವಾಳ ತಾಲೂಕಿನ ನಯನಾಡ್ ನ ಯಶೋಧ ಎಂಬ ವಧುವಿನ ಕುಟುಂಬದ ನಡುವೆ ನಡೆಯಿತು. ಬೆಳ್ಳಿಯ ತಗಡಿನ ಮೂಲಕ ವರ ಹಾಗೂ ವಧುವಿನ ಮೂರ್ತಿ ತಯಾರಿಸಿ ಆ ರೂಪಕ್ಕೆ ಧಾರೆ ಎರೆಯಲಾಯಿತು.
ಪ್ರೇತ ಮದುವೆಯೆಂದರೆ ಇದು ಕಾಟಾಚಾರದ ಮದುವೆಯಲ್ಲ. ಮಾಮೂಲಿ ಮದುವೆ ಹೇಗೆ ನಡೆಯುತ್ತದೋ ಅದೇ ರೀತಿ ಪ್ರೇತಗಳ ಮದುವೆಯು ನಡೆದಿದೆ. ಇಲ್ಲಿ ಹೆಣ್ಣು – ಗಂಡು ನೋಡುವ ಶಾಸ್ತ್ರದಿಂದ ಹಿಡಿದು, ನಿಶ್ಚಿತಾರ್ಥ, ಮದುವೆ ದಿನ ವರನ ಮನೆಗೆ ದಿಬ್ಬಣ ಬರುವುದು, ಹೆಣ್ಣಿಗೆ ಸೀರೆ, ರವಕೆ, ಕರಿಮಣಿ, ಕಾಲುಂಗುರ, ಬಳೆ, ಗಂಡಿಗೆ ಪಂಚೆ, ಶರ್ಟ್ ಸಿದ್ಧಪಡಿಸಿ ಶಾಸ್ತ್ರಬದ್ಧವಾಗಿಯೇ ಮದುವೆಯಾಗುತ್ತದೆ. ಧಾರೆಯ ಬಳಿಕ ಸೇರಿದವರಿಗೆ ಮದುವೆ ಊಟವನ್ನು ಬಡಿಸಲಾಗುತ್ತೆ.