Sat. Dec 7th, 2024

Mangalore: “ಕಲ್ಜಿಗ” ಚಿತ್ರದ ಟ್ರೇಲರ್ ಬಿಡುಗಡೆ – ಸೆ.13 ರಂದು ಸಿನಿಮಾ ತೆರೆಗೆ

ಮಂಗಳೂರು:(ಆ.19) ಕರಾವಳಿ ಸೀಮೆಯಿಂದ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಅನೇಕರು ಆಗಮಿಸಿದ್ದಾರೆ. ಗೆಲುವನ್ನೂ ದಾಖಲಿಸಿದ್ದಾರೆ. ಇದೀಗ `ಕಲ್ಜಿಗ’ ಎಂಬ ಚಿತ್ರದ ಮೂಲಕ ಮತ್ತೊಂದು ತಂಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಶೀರ್ಷಿಕೆಯಲ್ಲಿಯೇ ಕೌತುಕ ಬೆರೆತ ಸೆಳೆತವೊಂದನ್ನು ಬಚ್ಚಿಟ್ಟುಕೊಂಡಂತಿರುವ ಈ ಚಿತ್ರದ ಟ್ರೇಲರ್ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಅನಾವಣಗೊಂಡಿದೆ. ಚಿತ್ರತಂಡ, ನಾನಾ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಕಲ್ಜಿಗದ ಟ್ರೇಲರ್ ಬಿಡುಗಡೆಗೊಂಡಿದೆ.

ಇದನ್ನೂ ಓದಿ: 🎬ಮಂಗಳೂರು: ರೂಪೇಶ್ ಶೆಟ್ಟಿ ಹೊಸ ತುಳು ಚಿತ್ರ “ಜೈ” ಟೈಟಲ್ ಅನಾವರಣ ಕಾರ್ಯಕ್ರಮ


ಹಿಮಾನಿ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಕಲ್ಜಿಗ ಚಿತ್ರವನ್ನು ಸುಮನ್ ಸುವರ್ಣ ನಿರ್ದೇಶನ ಮಾಡಿದ್ದಾರೆ. ಶರತ್ ಕುಮಾರ್ ವಿ.ಕೆ ನಿರ್ಮಾಪಕರಾಗಿದ್ದಾರೆ.

ಭಾರತ್ ಸಿನಿಮಾಸ್ ನಲ್ಲಿ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಅಶೋಕ್ ರೈ, ಮಾಜಿ ಸಚಿವ ಬಿ ರಮಾನಾಥ ರೈ, ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಗೋಪಿನಾಥ್ ಭಟ್, ಮಾನಸಿ ಸುಧೀರ್ , ಅರ್ಜುನ್ ಕಾಪಿಕಾಡ್ , ಪ್ರಸಾದ್ ಶೆಟ್ಟಿ , ಸಚಿನ್ ಶೆಟ್ಟಿ , ಮುನೀರ್ ಕಾಟಿಪಳ್ಳ, ಜ್ಯೋತಿಷ್ ಶೆಟ್ಟಿ, ರೂಪ ವರ್ಕಾಡಿ, ನಿರ್ಮಾಪಕ ಶರತ್ ಕುಮಾರ್, ಸುಮನ್ ಸುವರ್ಣ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೈವ ನರ್ತಕರಾದ ಮಾಯಿಲ ಕುತ್ತಾರು , ರಾಘವ ಕುತ್ತಾರು ಹಾಗೂ ಜನಪದ ಪಾಡ್ದನ ಗಾಯಕರಾದ ಕುತ್ತಾರು ತಿಮ್ಮಕ್ಕ ಇವರನ್ನು ಚಿತ್ರತಂಡದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ವಿಶೇಷವೆಂದರೆ, ಬಹು ಕಾಲದ ನಂತರ ನಾದಬ್ರಹ್ಮ ಹಂಸಲೇಖ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶನಕ್ಕೆ ಮರಳಿದ್ದಾರೆ. ಗೀತರಚನೆಯತ್ತಲೂ ಕೈಯಾಡಿಸಿದ್ದಾರೆ.


ಇನ್ನುಳಿದಂತೆ ಗಿರ್ ಗಿಟ್, ಸರ್ಕಸ್, ಗಮ್ಜಾಲ್ ಮುಂತಾದ ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಸುಮನ್ ಸುವರ್ಣ `ಕಲ್ಜಿಗ’ದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ತುಳು ಚಿತ್ರರಂಗದಲ್ಲಿ ಕಿಂಗ್ ಆಫ್ ಆಕ್ಷನ್ ಎಂಬ ಬಿರುದಾಂಕಿತರಾಗಿರುವ ನಟ ಅರ್ಜುನ್ ಕಾಪಿಕಾಡ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಅಪ್ಪಟ ಕನ್ನಡತಿ ಸುಶ್ಮಿತಾ ಭಟ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಎಸ್. ಕೆ ಗ್ರೂಪ್ ಎಂಬ ಮಾರ್ಕೆಟಿಂಗ್ ಸಂಸ್ಥೆಯ ಮಾಲೀಕರಾಗಿರುವ ಶರತ್ ಕುಮಾರ್ ಎ.ಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಟರಾದ ಗೋಪಿನಾಥ್ ಭಟ್ , ಜ್ಯೋತಿಷ್ ಶೆಟ್ಟಿ , ಮಾನಸಿ ಸುಧೀರ್ , ವಿಜಯ್ ಶೋಭರಾಜ್ ಪಾವೂರ್ , ಶ್ಲಾಘಾ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯದ ಮಟ್ಟಿಗೆ ಕಲ್ಜಿಗದ ಆಂತರ್ಯವನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಉಡುಪಿ, ಮಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸೆಪ್ಟಂಬರ್ 13 ರಂದು ಕಲ್ಜಿಗ ರಾಜ್ಯಾದ್ಯಂತ ತೆರೆಕಾಣಲಿದೆ. ಮಂಗಳೂರು ಸೀಮೆಯ ಕನ್ನಡ ಭಾಷಾ ಶೈಲಿಯಲ್ಲಿ ಚಿತ್ರ ತಯಾರಾಗಿದೆ. ಧರ್ಮದ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ನಂತರದಲ್ಲಿ ಘಟಿಸುವ ರೋಚಕ ಕಥನ ಕಲ್ಜಿಗದಲ್ಲಿದೆ.

ಹಂಸಲೇಖ ಸಂಗೀತ- ಸಾಹಿತ್ಯ , ಸಚಿನ್ ಶೆಟ್ಟಿ ಛಾಯಾಗ್ರಹಣ , ಪ್ರಸಾದ್ ಕೆ ಶೆಟ್ಟಿ ಹಿನ್ನೆಲೆ ಸಂಗೀತ , ಯಶ್ವಿನ್ ಕೆ ಶೆಟ್ಟಿಗಾರ್ ಸಂಕಲನ ಈ ಚಿತ್ರಕ್ಕಿದೆ. ಕಾಂತಾರ ಖ್ಯಾತಿಯ ಸನೀಲ್ ಗುರು ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ರಾಧಾಕೃಷ್ಣ ಮಾಣಿಲ , ಪ್ರೊಡಕ್ಷನ್ ಮ್ಯಾನೇಜರ್ ಆಗಿ ಸಂದೀಪ್ ಶೆಟ್ಟಿ `ಕಲ್ಜಿಗ’ಕ್ಕೆ ಕೈ ಜೋಡಿಸಿದ್ದಾರೆ.

Leave a Reply

Your email address will not be published. Required fields are marked *