Wed. Nov 20th, 2024

Udupi: ಅಧಿಕಾರಿಗಳ ಗೆಟಪಲ್ಲಿ ದರೋಡೆಗೆ ಯತ್ನಿಸಿದ್ದ ತಂಡ – ಇಬ್ಬರು ಆರೋಪಿಗಳು ಅರೆಸ್ಟ್

ಉಡುಪಿ :(ಆ.23) ಪೊಲೀಸರು ಹಾಗೂ ಐಟಿ ಅಧಿಕಾರಿಗಳ ಸೋಗಿನಲ್ಲಿ ತೆಕ್ಕಟ್ಟೆ ಮಣೂರಿನ ಬಸ್‌ ನಿಲ್ದಾಣ ಸಮೀಪದ ಮನೆಯೊಂದಕ್ಕೆ ಅಪರಿಚಿತ ತಂಡವೊಂದು ಭೇಟಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮುಂಬಯಿಯಲ್ಲಿ ಇಬ್ಬರ‌ನ್ನು ಬಂಧಿಸಿ ಕರೆ ತಂದಿದ್ದಾರೆ. ಅಧಿಕಾರಿಗಳ ಸೋಗಿ ನಲ್ಲಿ ದರೋಡೆ ನಡೆಸಲು ಸಂಚು ರೂಪಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಇದನ್ನೂ ಓದಿ: 💥ಮೈಸೂರು: ಟಿ. ನರಸೀಪುರದ ಬಳಿ ಸ್ಪೋಟಕ ವಸ್ತುಗಳು ಪತ್ತೆ

ಚಿಕ್ಕಮಗಳೂರು ಮೂಲದ, ಪ್ರಸ್ತುತ ಮುಂಬಯಿಯಲ್ಲಿ ವಾಸವಿರುವ ಸಂತೋಷ್‌ ನಾಯಕ್‌ (45) ಹಾಗೂ ಮೂಲತಃ ಕಾಪು ನಿವಾಸಿ, ಪ್ರಸ್ತುತ ಮುಂಬಯಿಯಲ್ಲಿರುವ ದೇವರಾಜ್‌ ಸುಂದರ್‌ ಮೆಂಡನ್‌(46) ಬಂಧಿತರು. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಪ್ರಕರಣದ ವಿವರ:
ಜು. 25ರಂದು ಬೆಳಗ್ಗೆ 8.30 ಗಂಟೆಗೆ ಮಣೂರು ನಿವಾಸಿ ಸುಧೀಂದ್ರ ಪೂಜಾರಿಯ ಮನೆಯ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದವಾಗಿದ್ದು, ಆಗ ಸುಧೀಂದ್ರ ಅವರ ಪತ್ನಿ ಕವಿತಾ ಮಾತ್ರ ಮನೆಯಲ್ಲಿದ್ದರು. ಅನಂತರ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ ಸೆಕ್ಯುರಿಟಿ ಸಂಸ್ಥೆಯವರು ಕರೆ ಮಾಡಿ, ನಿಮ್ಮ ಮನೆಗೆ ಸ್ವಿಫ್ಟ್‌ ಮತ್ತು ಇನ್ನೋವಾ ಕಾರಿನಲ್ಲಿ 6-8 ಜನ ಮಂದಿ ಆಗಮಿಸಿ ಗೇಟು ತೆರೆಯಲು ಯತ್ನಿಸಿದ್ದರು. ಸಾಧ್ಯವಾಗದಿದ್ದಾಗ ಕಾಂಪೌಂಡ್‌ ಹಾರಿ ಮನೆಗೆ ಬಂದು ಕಿಟಕಿಯನ್ನು ಬಲಾತ್ಕಾರವಾಗಿ ತೆಗೆಯಲು ಪ್ರಯತ್ನಿಸಿದ್ದಾರೆ.

ಅನಂತರ ಗೇಟಿಗೆ ಹಾನಿ ಮಾಡಿ ಮರಳಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಮೂರು ತಂಡ ರಚಿಸಲಾಗಿತ್ತು.

ಪ್ರಕರಣದಲ್ಲಿ 8 ಮಂದಿ ಆರೋಪಿಗಳು ಇರುವುದರಿಂದ ಹಾಗೂ ಇನ್ನೂ 6 ಮಂದಿಯನ್ನು ಪತ್ತೆ ಹಚ್ಚಿ ತನಿಖೆ ನಡೆಸ ಬೇಕಾಗಿರುವುದರಿಂದ ಪೊಲೀಸರು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಆರೋಪಿತರು ದರೋಡೆ ಮಾಡುವ ಸಂಚು ರೂಪಿಸಿ ಮಹಾರಾಷ್ಟ್ರದಿಂದ ಬಂದಿದ್ದರು.

ಆರೋಪಿಗಳಲ್ಲಿ ಓರ್ವ ಶಾರ್ಪ್‌ಶೂಟರ್‌ ಆಗಿದ್ದು, ಆತನ ವಿರುದ್ಧ ಮುಂಬಯಿಯಲ್ಲಿ ಮೋಕಾ (ಮಹಾರಾಷ್ಟ್ರ ಸಂಘಟಿತ ಅಪರಾಧಗಳ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಉಳಿದ ಆರೋಪಿಗಳ ವಿರುದ್ಧವೂ ವಿವಿಧ ಠಾಣೆಗಳಲ್ಲಿ 10ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎನ್ನಲಾಗುತ್ತಿದೆ.

ಪ್ರಕರಣದಲ್ಲಿ ಜಿಲ್ಲೆಯ ಸ್ಥಳೀಯನೋರ್ವನ ಕೈವಾಡವಿದ್ದು, ಆತ ದೇವರಾಜ್‌ ಮೆಂಡನ್‌ಗೆ ಮಣೂರಿನ ಸುಧೀಂದ್ರ ಪೂಜಾರಿ ಅವರಲ್ಲಿ ಸಾಕಷ್ಟು ಹಣ ಇದೆ ಎಂದು ತಿಳಿಸಿದ್ದ. ಆತ ಈ ವಿಷಯವನ್ನು ಕ್ರಿಮಿನಲ್‌ ಹಿನ್ನೆಲೆಯುಳ್ಳವರ ತಂಡ ರಚಿಸಿಕೊಂಡು ದರೋಡೆ ಕೃತ್ಯಗಳನ್ನು ನಡೆಸುವ ಮುಂಬಯಿಯಲ್ಲಿರುವ ತನ್ನ ಬಾಸ್‌ಗೆ ತಿಳಿಸಿದ್ದ. ಅನಂತರ ಆತನ ಸೂಚನೆ ಮೇರೆಗೆ ಎಂಟು ಮಂದಿಯ ತಂಡವೊಂದನ್ನು ರಚಿಸಿ ಕೋಟಕ್ಕೆ ಕಳುಹಿಸಿಕೊಟ್ಟಿದ್ದ ಎಂದು ಹೇಳಲಾಗಿದೆ.

“ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಉಳಿದ ಆರೋಪಿಗಳನ್ನು ಪತ್ತೆಹಚ್ಚಲಾಗುವುದು”.

-ಡಾ| ಕೆ. ಅರುಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Leave a Reply

Your email address will not be published. Required fields are marked *