Sat. Dec 28th, 2024

Belthangadi: ಬೆಳ್ತಂಗಡಿ ತಾಲೂಕು ಆಡಳಿತ ಹಾಗೂ ಅಬಕಾರಿ ಇಲಾಖೆಯಿಂದ ವ್ಯಾಪಕ ಭ್ರಷ್ಟಾಚಾರ

ಬೆಳ್ತಂಗಡಿ:(ಆ.28) ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರದಿಂದ ಮೂಡಾ, ವಾಲ್ಮೀಕಿ ನಿಗಮಗಳ ಅವ್ಯವಹಾರ ಸದ್ದು ಮಾಡುತ್ತಿರುವ ನಡುವೆ ಇದೀಗ ಬೆಳ್ತಂಗಡಿ ತಾಲೂಕಿನಲ್ಲೂ ತಾಲೂಕು ಆಡಳಿತ ಹಾಗೂ ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಇದರ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಮಂಜುನಾಥ್ ಸಾಲ್ಯಾನ್ ರವರು ಆ.27ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದನ್ನೂ ಓದಿ: 🔶ಉಜಿರೆ: ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಹ್ಯಾಂಡ್ ಬಾಲ್ ಪಂದ್ಯಾಟ

2024 ಮಾರ್ಚ್ 9ರಂದು ಗುರುವಾಯನಕೆರೆ ಕಿನ್ಯಮ್ಮ ಸಭಾಭವನದಲ್ಲಿ ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಖರ್ಚಿನ ಬಿಲ್‌ಗಳಲ್ಲಿ ಅವ್ಯವಹಾರಗಳು ನಡೆದಿದೆ. ತಾಲೂಕು ಕಚೇರಿಗೆ ಒರಿಜಿನಲ್ ಬಿಲ್‌ಗಳು ಬಂದಿಲ್ಲ. ಕೆಲವೊಂದರಲ್ಲಿ ಜಿಎಸ್‌ಟಿ ಇಲ್ಲ. ಕೆಲವೊಂದರಲ್ಲಿ ಜಿಎಸ್ ಟಿ ಇದೆ ಎಲ್ಲಾ ಬಿಲ್‌ ಗಳಲ್ಲಿ ಒಬ್ಬರದ್ದೇ ಕೈ ಬರಹಗಳಿವೆ. ಊಟೋಪಚಾರದ ಖರ್ಚು, ಕಾರ್ಯಕ್ರಮದ ಖರ್ಚು, ಸಮಾವೇಶಕ್ಕೆ ಜನರನ್ನು ಕರೆತರಲು ಬಸ್‌ಗಳ ಖರ್ಚುವೆಚ್ಚಗಳಿಗೆ ಒಂದಕ್ಕೊಂದು ತಾಳೆಯಾಗುತ್ತಿಲ್ಲ, ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ 3,200 ಜನರು ಭಾಗವಹಿಸಿದ್ದರು. ಆದರೆ 5,000 ಸಾವಿರ ಜನರ ಊಟದ ಬಿಲ್‌ ಪಾವತಿಯಾಗಿದೆ. ಊಟದ ಪ್ರಾಯೋಜಕತ್ವವನ್ನು ಸೌತಡ್ಕ ಮಹಾಗಣಪತಿ ದೇವಸ್ಥಾನ ವಹಿಸಿತ್ತು ಎಂದು ತಿಳಿಸಿದರು.

ಎಲ್ಲಾ ಖರ್ಚುಗಳ ಪಾವತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸರ್ಕಾರವೇ ರೂಪಿಸಿದ ನಿಯಮಗಳನ್ನು ಸರ್ಕಾರವೇ ಉಲ್ಲಂಘಿಸಿದೆ. ಆರ್.ಟಿ.ಒ ಕಾಯಿದೆ ಪ್ರಕಾರ ಶಾಲಾ ಬಸ್‌ನ್ನು ಬಾಡಿಗೆಗೆ ಕೊಡುವಂತಿಲ್ಲ. ಇಲ್ಲಿ ಆ‌ರ್.ಟಿ.ಒ ಶಾಲಾ ಬಸ್‌ಗಳ ಮೇಲೆ, ಕ್ರಮ ತೆಗೆದುಕೊಳ್ಳುವುದು ಅಥವಾ ತಹಶೀಲ್ದಾರರು ಕ್ರಮ ಕೈಗೊಳ್ಳುವುದಾ? ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಎಂದರು. ಗುರುವಾಯನಕೆರೆ ಕಿನ್ಯಮ್ಮ ಸಭಾಭವನದ ಆಸನ ಸಂಖ್ಯೆ ಗರಿಷ್ಠ 2,000 ಇದ್ದು, ತಾಲೂಕು ಆಡಳಿತ ನೀಡಿದ ಸಂಖ್ಯೆ. ವ್ಯಯಿಸಿದ ಖರ್ಚಿನಲ್ಲಿರುವ ಸಂಖ್ಯೆ, ಮೊಬಲಗು ಯಾವುದು ಹೊಂದಾಣಿಕೆಯಾಗುತ್ತಿಲ್ಲ.

ಈ ಎಲ್ಲಾ ಅವ್ಯವಹಾರ ಗಮನಿಸಿದಾಗ ಸರ್ಕಾರದ ಮೂಡಾ, ವಾಲ್ಮೀಕಿ ಹಗರಣದಂತೆ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಹೆಸರಿನಲ್ಲಿ ಸರ್ಕಾರದ ಆಡಳಿತ ವ್ಯವಸ್ಥೆ ಲೂಟಿ ಹೊಡೆದಿದ್ದು, ಸ್ಪಷ್ಟವಾಗಿ ಗೋಚರವಾಗುತ್ತಿದೆ. ಬೆಳ್ತಂಗಡಿಯ ಸಮಾವೇಶದ ಈ ಅವ್ಯವಹಾರದ ಕುರಿತು ತಹಶೀಲ್ದಾರರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದರು.

ತಾಲೂಕಿನ ಅಬಕಾರಿ ಇಲಾಖೆಯಲ್ಲೂ ನಿರಂತರವಾಗಿ, ನಿಯಮಬಾಹಿರವಾಗಿ ಮದ್ಯಮಾರಾಟ – ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಈ ಅಕ್ರಮ ವ್ಯವಹಾರದಿಂದ ಅಧಿಕಾರಿಗಳ ಬೆಂಬಲದ ಮೂಲಕ ಕೆಲವು ಪುಡಾರಿಗಳು ಹಪ್ತಾ ವಸೂಲು ಮಾಡುತ್ತಿದ್ದಾರೆ.

ಸಿ.ಎಲ್.‌ 7 ಸನ್ನದ್ದಿನಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ನಿಯಮದಡಿ ಕೊಠಡಿಯಲ್ಲಿ ತಂಗದೇ ಇರುವ ಗ್ರಾಹಕರಿಗೆ ಮದ್ಯವನ್ನು ಹೊರಗಡೆ ನೀಡುವ ಅವಕಾಶವಿರುವುದಿಲ್ಲ ಎಂದು ಹೇಳಿದರು.

ಅಬಕಾರಿ ಇಲಾಖೆಯ ಷರತ್ತುಗಳನ್ನು ಮೀರಿ ಮದ್ಯ ಮಾರಾಟ ಮಾಡಿ ಅಬಕಾರಿ ಕಾಯಿದೆಯನ್ನು ಉಲ್ಲಂಘನೆ ಮಾಡಿದ ಲೈಸೆನ್ಸ್‌ ದಾರರ ವಿರುದ್ಧ ಅಬಕಾರಿ ಆಯುಕ್ತರು ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಶುಭಕರ ಪೂಜಾರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *