ಉಡುಪಿ:(ಅ.7) ಉಡುಪಿಯಲ್ಲಿ ಅ.6 ರಂದು ಸುರಿದ ಭಾರೀ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಮುದ್ರಾಡಿ ಸಮೀಪದ ಬಲ್ಲಾಡಿ ಎಂಬಲ್ಲಿ ಮಧ್ಯಾಹ್ನ ಸುರಿದ ದಿಢೀರ್ ಭಾರೀ ಮಳೆಗೆ ಜಲ ಪ್ರವಾಹ ಉಂಟಾಗಿದೆ.
ಇದನ್ನೂ ಓದಿ: 🔯Aries to Pisces: ಅಧಿಕ ಆಲೋಚನೆಯಿಂದ ಈ ರಾಶಿಯವರ ಮನಸ್ಸು ದುರ್ಬಲವಾಗಬಹುದು!!
ಇದರಿಂದಾಗಿ, ಹಲವು ಮನೆಗಳು ಹಾಗೂ ತೋಟಗಳಿಗೆ ನೀರು ನುಗ್ಗಿವೆ. ಅಲ್ಲದೆ ಕಾರು, ಬೈಕುಗಳು ನೆರೆಯ ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ನಷ್ಟ ಉಂಟಾಗಿದೆ.
ಮಧ್ಯಾಹ್ನ 2.30ರಿಂದ 3.45ರವರೆಗೆ ಬಲ್ಲಾಡಿಯ ಈಶ್ವರನಗರ ಸಮೀಪ ಭಾರೀ ಮಳೆ ಸುರಿದಿದ್ದು, ಇದರ ಪರಿಣಾಮ ನೆರೆ ಸೃಷ್ಟಿಯಾಗಿದೆ. ಮಳೆಯ ನೀರು ಮುದ್ರಾಡಿಯ ಹೊಸ ಕಂಬ್ಲ, ಕಾಂತರಬೈಲು, ಕೆಲಕಿಲ ಎಂಬಲ್ಲಿನ ಸುಮಾರು ಎಂಟು ಮನೆಗಳಿಗೆ ನುಗ್ಗಿವೆ. ಅಲ್ಲದೆ ಇಡೀ ಪ್ರದೇಶಗಳು ಜಲಾವೃತಗೊಂಡಿವೆ.
ಹಠಾತ್ ಪ್ರವಾಹಕ್ಕೆ 2 ಕಾರುಗಳು ಮತ್ತು ಬೈಕ್‌ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮನೆಯೊಳಗೆ ಸಿಲುಕಿಕೊಂಡ ಮನೆ ಮಂದಿಯನ್ನು ಹಗ್ಗಕಟ್ಟಿ ಏಣಿಯ ಸಹಾಯದಿಂದ ರಕ್ಷಿಸಲಾಯಿತು. ಇದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
ಇನ್ನು ನೆರೆಯಿಂದಾಗಿ ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಸ್ಥಳೀಯರು ಬದಲಿ ರಸ್ತೆಯ ಮೂಲಕ ಸಂಚರಿಸುತ್ತಿದ್ದಾರೆ. ಮಳೆಗೆ ಒಂದು ಮನೆಯ ದನದ ಕೊಟ್ಟಿಗೆಗೆ ಕುಸಿದಿದ್ದು, ಇಲ್ಲಿನ ಒಂದು ದನ ನಾಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಲ್ಲದೆ ಈ ಪರಿಸರದಲ್ಲಿ ಭಾರೀ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಸಿಡಿಲು ಬಡಿದ ಪರಿಣಾಮ ಮುದ್ರಾಡಿ, ಪಡುಕುಡುರು, ಎಳಗೋಳಿ ಎಂಬಲ್ಲಿನ ಹಲವು ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.
Udupi: Cloudburst in Hebri