Mon. Apr 21st, 2025

Subrahmanya: ಎಸ್‌ಎಸ್‌ ಪಿಯುನಲ್ಲಿ ಬೃಹತ್ ರಕ್ತದಾನ ಶಿಬಿರ – 88 ದಾನಿಗಳಿಂದ ರಕ್ತದಾನ

ಸುಬ್ರಹ್ಮಣ್ಯ:(ನ.11) ಕೃತಕವಾಗಿ ನಿರ್ಮಾಣ ಮಾಡಲು ಅತ್ಯಂತ ದೊಡ್ಡ ಸಂಪತ್ತು ರಕ್ತ. ಇದನ್ನು ಪರಸ್ಪರ ನೀಡುವುದು ಅನಿವಾರ್ಯವಾಗಿದೆ. ಆದುದರಿಂದ ರಕ್ತ ನೀಡುವ ಉತ್ತಮ ಮನಸ್ಸು ಸರ್ವರಲ್ಲಿ ಮೂಡಬೇಕು. ಪರರ ಆರೋಗ್ಯ ಸಮೃದ್ಧಿಗೆ ನೀಡುವ ಪರಮ ಶ್ರೇಷ್ಠ ಕೊಡುಗೆ ರಕ್ತದಾನವಾಗಿದೆ. ಯುವ ಜನಾಂಗ ರಕ್ತದಾನವನ್ನು ಬದುಕಿನ ಶ್ರೇಷ್ಠ ಅಂಗ ಎಂದು ಪರಿಗಣಿಸಬೇಕು. ಹೆಚ್ಚು ಹೆಚ್ಚು ರಕ್ತದಾನಿಗಳು ಮುಂದೆ ಬಂದಾಗ ಆವಶ್ಯಕತೆ ಇದ್ದವರಿಗೆ ಶೀಘ್ರ ರಕ್ತ ದೊರುವಂತಾಗುತ್ತದೆ. ರಕ್ತದಾನದಿಂದ ಆರೋಗ್ಯ ವೃದ್ಧಿಯಾಗುವುದರೊಂದಿಗೆ ಮಾನಸಿಕ ಶಾಂತಿ ಮತ್ತು ನೆಮ್ಮದಿ ದೊರಕುತ್ತದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಪಿ.ಬಿ.ಸುಧಾಕರ ರೈ ಹೇಳಿದರು.

18 ಸಂಘ ಸಂಸ್ಥೆಗಳ ಸಹಕಾರ:

ಎಸ್‌ಎಸ್‌ಪಿಯು ಕಾಲೇಜು ಸುಬ್ರಹ್ಮಣ್ಯ, ಎಸ್‌ಎಸ್‌ಪಿಯು ಕಾಲೇಜು ಯುವ ರೆಡ್‌ಕ್ರಾಸ್ ಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸುಳ್ಯ ಇದರ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ, ಯುವ ತೇಜಸ್ ಟ್ರಸ್ಟ್(ರಿ), ಸುಬ್ರಹ್ಮಣ್ಯ ಪೋಲೀಸ್ ಠಾಣೆ, ಡಾ.ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್, ಕುಕ್ಕೆಶ್ರೀ ಆಟೋ ಚಾಲಕ ಮಾಲಕರ ಸಂಘ, ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘ ಸುಬ್ರಹ್ಮಣ್ಯ, ಪ್ರೆಸ್ ಕ್ಲಬ್ ಸುಬ್ರಹ್ಮಣ್ಯ, ಕುಕ್ಕೆಶ್ರೀ ಖಾಸಗಿ ಟ್ಯಾಕ್ಸಿ ಚಾಲಕ ಮಾಲಕರ ಸಂಘ, ಕುಕ್ಕೆಶ್ರೀ ಸರ್ಕಲ್ ಸುಬ್ರಹ್ಮಣ್ಯ, ನಮ್ಮೂರ ಜವನೇರ್ ಕುಲ್ಕುಂದ, ಕುಕ್ಕೆ ದೇವಳದ ನೌಕರರ ವೃಂದ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸುಬ್ರಹ್ಮಣ್ಯ, ಅಶ್ವಮೇಧ ಗೆಳೆಯರ ಬಳಗ ಸುಬ್ರಹ್ಮಣ್ಯ ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಆದಿತ್ಯವಾರ ನಡೆದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ವಹಿಸಿದ್ದರು. ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಪ್ರೊ.ಕೆ.ಆರ್.ಶೆಟ್ಟಿಗಾರ್, ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಅಧ್ಯಕ್ಷ ಡಾ.ರವಿ ಕಕ್ಕೆಪದವು, ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೃಷ್ಣಕುಮಾರ್ ಬಾಳುಗೋಡು, ಉಪಾಧ್ಯಕ್ಷ ವಿಷ್ಣು ಪಾತಿಕಲ್ಲು, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್ ಬಿ.ಎನ್, ಯುವ ರೆಡ್‌ಕ್ರಾಸ್‌ನ ಕೌನ್ಸಿಲರ್ ಶ್ರುತಿ ಅಶ್ವತ್, ಜೂನಿಯರ್ ರೆಡ್ ಕ್ರಾಸ್ ನಾಯಕ ಬಿಪಿನ್, ನಾಯಕಿ ನವ್ಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

88 ಜನರಿಂದ ರಕ್ತದಾನ:

ವಿಶ್ವ ಆರೋಗ್ಯ ದಿನ ನಡೆದ ರಕ್ತದಾನ ಶಿಬಿರದಲ್ಲಿ ಕೈಜೋಡಿಸಿದ ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಸೇರಿದಂತೆ 88 ಮಂದಿ ರಕ್ತದಾನ ಮಾಡಿದರು. ಈ ಮೂಲಕ ಗ್ರಾಮೀಣ ಭಾಗದಲ್ಲಿ ದಾಖಲೆಯ 88 ಯುನಿಟ್ ರಕ್ತವನ್ನು ನೀಡಲಾಯಿತು. ರಕ್ತದಾನಿಗಳಿಗೆ ಹಣ್ಣಿನ ಪೇಯ, ಮುಸುಂಬಿ, ಆ್ಯಪಲ್, ಕಿತ್ತಾಳೆ, ಬಾಳೆಹಣ್ಣು, ಐಸ್‌ಕ್ರೀಮ್ ಮತ್ತು ಮೊಟ್ಟೆ ನೀಡಲಾಯಿತು. ಗ್ರಾ.ಪಂ.ಸುಬ್ರಹ್ಮಣ್ಯ, ರೋಟರಿ ಅಧ್ಯಕ್ಷ ಚಂದ್ರಶೇಖರ ನಾಯರ್, ಉದ್ಯಮಿ ಕಾರ್ತಿಕ್ ಕಾಮತ್, ಜೇಸಿಸ್ ಪೂರ್ವಾಧ್ಯಕ್ಷ ದೀಪಕ್ ನಂಬಿಯಾರ್, ಪ್ರೆಸ್ ಕ್ಲಬ್, ಲಯನ್ಸ್ ಕ್ಲಬ್, ಭಾರತೀಯ ರೆಡ್ ಕ್ರಾಸ್ ಘಟಕ ರಕ್ತದಾನಿಗಳಿಗೆ ಹಣ್ಣುಹಂಪಲಿನ ವ್ಯವಸ್ಥೆ ಮಾಡಿತ್ತು.

ರೆಡ್ ಕ್ರಾಸ್‌ನಿಂದ ಕೊಡುಗೆ:


ಇದೇ ಸಂದರ್ಭ ಭಾರತೀಯ ರೆಡ್ ಕ್ರಾಸ್ ವತಿಯಿಂದ ಸುಮಾರು 25 ಸಾವಿರ ಮೌಲ್ಯದ ಸಾಮಾಗ್ರಿಗಳನ್ನು ಕಾಲೇಜಿಗೆ ಹಸ್ತಾಂತರಿಸಲಾಯಿತು. ರೆಡ್‌ಕ್ರಾಸ್ ಸಭಾಪತಿ ಪಿ.ಬಿ.ಸುಧಾಕರ ರೈ ಅವರು ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಟಾರ್ಪಾಲ್ ಅನ್ನು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಅವರಿಗೆ ಹಸ್ತಾಂತರಿಸಿದರು. ಯುವ ರೆಡ್‌ಕ್ರಾಸ್‌ನ ಕೌನ್ಸಿಲರ್ ಶ್ರುತಿ ಅಶ್ವತ್ ಸ್ವಾಗತಿಸಿದರು. ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ವಂದಿಸಿದರು. ವಿದ್ಯಾರ್ಥಿನಿ ಪ್ರೀತಿ.ಆರ್.ಕೆ.ರೈ ನಿರೂಪಿಸಿದರು. ಕಾಲೇಜಿನ ಸಿಬ್ಬಂದಿ ಮಹೇಶ್ ಕೆ.ಎಚ್, ಯುವ ರೆಡ್‌ಕ್ರಾಸ್ ಸದಸ್ಯರು ಸಹಕರಿಸಿದರು.

Leave a Reply

Your email address will not be published. Required fields are marked *