Sat. Nov 23rd, 2024

Mangaluru: ಅಂಗವಿಕಲ ಬೀದಿ ವ್ಯಾಪಾರಿಗೆ ಹಫ್ತಾ ವಸೂಲಿ ಹೆಸರಲ್ಲಿ ಕಿರುಕುಳ ಆರೋಪ – ಬಿಜೆಪಿ ಮುಖಂಡನ ನಡೆಗೆ DYFI ಖಂಡನೆ!!

ಮಂಗಳೂರು:(ನ.22) ಮಂಗಳೂರಿನ ಪಡೀಲ್ ಮುಖ್ಯ ರಸ್ತೆಯ ಬಳಿ ಕಳೆದ ಹಲವು ವರುಷಗಳಿಂದ ಹೂ ಮಾರಿ ಬೀದಿ ವ್ಯಾಪಾರ ಮಾಡುವ ಮೂಲಕ ಜೀವನ ನಿರ್ವಹಿಸುತ್ತಿರುವ ಚಂದ್ರಹಾಸ್ ಪೂಜಾರಿ ಎಂಬವರಿಗೆ ಕಳೆದ ಕೆಲವು ದಿನಗಳಿಂದ ಸ್ಥಳೀಯ ಮಾಜಿ ಕಾರ್ಪೊರೇಟರ್ ಬಿಜೆಪಿ ಮುಖಂಡರಾದ ವಿಜಯ ಕುಮಾರ್ ಶೆಟ್ಟಿ ಮತ್ತು

ಇದನ್ನೂ ಓದಿ: ⭕ಪುತ್ತೂರು : ಸ್ಕೂಲ್ ಬಸ್ಸಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮನೆಗೆ ನುಗ್ಗಿದ್ದ ಬಸ್ಸು!!

ಆತನ ಹೆಸರಲ್ಲಿ ಹಿಂಬಾಲಕರು ಹಫ್ತಾ ವಸೂಲಿ ಮಾಡುತ್ತಿರುವ ಬಗ್ಗೆ ಚಂದ್ರಹಾಸ್ ಪೂಜಾರಿ ವಿಡಿಯೋ ಮೂಲಕ ಚಿತ್ರಿಸಿದ ಹೇಳಿಕೆಯ ಆರೋಪವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡಿವೈಎಫ್ಐ ನಿಯೋಗ ಸಂತ್ರಸ್ತ ಚಂದ್ರಹಾಸ್ ಪೂಜಾರಿಯ ಗೂಡಂಗಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾನೆದುರಿಸುತ್ತಿರುವ ಸಮಸ್ಯೆಗಳನ್ನು ತೋಡಿಕೊಂಡಿದ್ದಾರೆ.

ಪಡೀಲ್ ಬಳಿ ಗೂಡಂಗಡಿಯಲ್ಲಿ ಹೂ ಮಾರಿಕೊಂಡು ಬೀದಿ ವ್ಯಾಪಾರ ನಡೆಸುತ್ತಿರುವ ಚಂದ್ರಹಾಸ ಪೂಜಾರಿ ಶೇಕಡಾ 75% ಅಂಗ ವೈಕಲ್ಯವನ್ನು ಹೊಂದಿರುತ್ತಾರೆ. ತನ್ನ ಎರಡೂ ಕಾಲುಗಳಲ್ಲಿ ಬಲ ಕಳೆದುಕೊಂಡು ನಡೆದಾಡದ ಸ್ಥಿತಿಯಲ್ಲಿರುವ ಇವರು ತನ್ನ ಸ್ವಾವಲಂಬಿ ಬದುಕಿಗಾಗಿ ಕಳೆದ ಐದಾರು ವರುಷಗಳಿಂದ ಬೀದಿ ವ್ಯಾಪಾರದಲ್ಲಿ ತೊಡಗಿಸಿಕೊಂಡು ತನ್ನ ಜೀವನ ಬದುಕನ್ನು ಸಾಗಿಸಿಕೊಂಡಿರುತ್ತಾರೆ.

ಈ ನಡುವೆ ಬಿಜೆಪಿ ನಾಯಕ ಮಾಜಿ ಕಾರ್ಪೊರೇಟರ್ ವಿಜಯ ಕುಮಾರ್ ಶೆಟ್ಟಿ ಚಂದ್ರಹಾಸ ಪೂಜಾರಿ ಅಂಗಡಿ ತೆರವಿಗೆ ಒತ್ತಡವನ್ನು ಹೇರುತ್ತಿದ್ದು ನಾನಾ ರೀತಿಯಲ್ಲಿ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಡಿವೈಎಫ್ಐ ನಿಯೋಗದಲ್ಲಿ ದೂರಿದ್ದಾರೆ.

ಮತ್ತು ವಿಜಯ ಕುಮಾರ್ ಶೆಟ್ಟಿ ಹೆಸರಲ್ಲಿ ಆತನ ಹಿಂಬಾಲಕರು ಹಫ್ತಾ ವಸೂಲಿಗೂ ಬಂದು ಕಿರುಕುಳ ನೀಡುತ್ತಿರುವ ಬಗ್ಗೆ ಮಾನಸಿಕವಾಗಿ ನೊಂದಿಕೊಂಡು ತಾನೆದುರಿಸುತ್ತಿರುವ ಸಮಸ್ಯೆಗಳನ್ನು ವಿಡಿಯೋ ಮೂಲಕ ದಾಖಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಬಿಜೆಪಿಯವರು ಆತನನ್ನು ಸ್ಥಳೀಯ ಠಾಣೆಗೆ ಎಳೆದು ಮಟ್ಕ ಕೇಸಿನಲ್ಲಿ ಸಿಲುಕಿಸಿ ಕೇಸು ದಾಖಲಿಸುವ ಮತ್ತು ಬೇರೆ ಬೇರೆ ರೀತಿಯ ಜೀವ ಬೆದರಿಕೆಯನ್ನು ಒಡ್ಡುತ್ತಿದ್ದಾರೆ.

ಕಷ್ಟಪಟ್ಟು ದುಡಿದು ತಿನ್ನುವ ಅಮಾಯಕ ಬೀದಿ ವ್ಯಾಪಾರಿ ಚಂದ್ರಹಾಸ್ ಪೂಜಾರಿಯನ್ನು ವಿನಾ ಕಾರಣ ಬೆದರಿಸುತ್ತಿರುವ ಬಿಜೆಪಿ ಮುಖಂಡ ಮಾಜಿ ಕಾರ್ಪೊರೇಟರ್ ವಿಜಯ ಕುಮಾರ್ ಶೆಟ್ಟಿ ನಡೆಯನ್ನು ಡಿವೈಎಫ್ಐ ಖಂಡಿಸುತ್ತದೆ ಮತ್ತವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತದೆ.

ಈ ತರಹದ ಕಿರುಕುಳ ಮುಂದುವರಿದರೆ ಡಿವೈಎಫ್ಐ ಅಂಗವಿಕಲ ಚಂದ್ರಹಾಸ ಪೂಜಾರಿ ಜೊತೆ ನಿಲ್ಲುತ್ತದೆ ಎಂದು ಡಿವೈಎಫ್ಐ ನಿಯೋಗ ಧೈರ್ಯ ತುಂಬಿ ಮಾತನಾಡಿಸಿದೆ. ನಿಯೋಗದಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್ಐ ನಗರ ಅಧ್ಯಕ್ಷರಾದ ಜಗದೀಶ್ ಬಜಾಲ್, ಮುಖಂಡರಾದ ದೀಪಕ್ ಬಜಾಲ್, ವರಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *