ಪುತ್ತೂರು :(ನ.22) ಶಾಲಾ ಬಸ್ಸಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮದುವೆಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಬಸ್ಸು ರಸ್ತೆ
ಅಂಚಿನಲ್ಲಿದ್ದ ಮನೆಗೆ ನುಗ್ಗಿದ್ದ ಘಟನೆ ಕಾವು ಸಮೀಪದ ಅಮ್ಮಿನಡ್ಕ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಮನೆ ಸಂಪೂರ್ಣ ಜಖಂಗೊಂಡಿದ್ದು, ಮನೆಯಲ್ಲಿದ್ದವರಿಗೆ ಹಾಗೂ ಪ್ರಯಾಣಿಕರಿಗೆ ಯಾವುದೇ ಆಪಾಯ ಸಂಭವಿಸಿಲ್ಲ ಎನ್ನುವ ಮಾಹಿತಿ ಲಭಿಸಿದೆ.
ಇದನ್ನೂ ಓದಿ: ⭕ಉಡುಪಿ: ವಿಕ್ರಂ ಗೌಡ ಎನ್ ಕೌಂಟರ್ ನಂತರ ಪ್ರವಾಸಿಗರಿಗೆ ಕೂಡ್ಲು ಫಾಲ್ಸ್ ಗೆ ತಾತ್ಕಾಲಿಕ ನಿರ್ಬಂಧ!!
ಅಪಘಾತವು ಸುಳ್ಯ ಪುತ್ತೂರು ರಸ್ತೆಯ ಅಮ್ಮಿನಡ್ಕ ಬಳಿ ಸಂಭವಿಸಿದೆ. ಮದುವೆಗೆ ತೆರಳುವ ಪ್ರಯಾಣಿಕರನ್ನು ಕೊಂಡು ಹೋಗುತ್ತಿದ್ದ ಬಸ್ಸು ಪುತ್ತೂರಿನಿಂದ ಸುಳ್ಯದ ಕಡೆಗೆ ಹೋಗುತ್ತಿತ್ತು.
ಮಧುರ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಸೇರಿದ ಬಸ್ಸು ಸುಳ್ಯದಿಂದ ಪರ್ಲಂಪಾಡಿಗೆ ಮಕ್ಕಳನ್ನು ಕರೆದುಕೊಂಡು ಬರಲು ತೆರಳುತ್ತಿತ್ತು. ಅದು ಅಮ್ಮಿನಡ್ಕ ಬಳಿ ಪೆರ್ಲಂಪಾಡಿ ಕಡೆಗೆ ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಮದುವೆ ಬಸ್ಸು ಬಂದಿದ್ದು. ಅದರ ಚಾಲಕ ಸ್ಕೂಲ್ ಬಸ್ಸಿಗೆ ಢಿಕ್ಕಿ ಹೊಡೆಯುವದನ್ನು ತಪ್ಪಿಸಲು ಇನ್ನೊಂದು ಬದಿಗೆ ವಾಹನವನ್ನು ತಿರುಗಿಸಿದ್ದಾರೆ.
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ರಸ್ತೆ ಅಂಚಿನಲ್ಲಿದ್ದ ಮನೆಗೆ ನುಗ್ಗಿದೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಇನ್ನು ಬಸ್ಸಿನಲ್ಲಿದ್ದವರಿಗೂ ಸಣ್ಣಪುಟ್ಟ ಗಾಯಗಳಾಗಿದೆ ಹೊರತು ಯಾವುದೇ ಗಂಭೀರ ಅಪಾಯ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.