Sat. Dec 28th, 2024

Hassan: ಜವರಾಯನ ಅಟ್ಟಹಾಸಕ್ಕೆ IPS ಅಧಿಕಾರಿ ಬಲಿ – DySP ಆಗಿ ಚಾರ್ಜ್‌ ತೆಗೆದುಕೊಳ್ಳಬೇಕಿದ್ದ ಹರ್ಷವರ್ಧನ್ ದುರಂತ ಅಂತ್ಯ!!

ಹಾಸನ (ಡಿ.02): ಚಾಲಕನ ನಿಯಂತ್ರಣ ತಪ್ಪಿ ಜೀಪ್ ರಸ್ತೆ ಬದಿಗೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪ್ರೊಬೆಷನರಿ ಐಪಿಎಸ್​ ಅಧಿಕಾರಿ ಹರ್ಷವರ್ಧನ್ (26) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಾಸನ ತಾಲೂಕಿನ ಕಿತ್ತಾನೆಗಡಿ ಗ್ರಾಮದ ಬಳಿ ಜೀಪ್‌ ಪಲ್ಟಿಯಾಗಿತ್ತು. ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ​ಪ್ರೊಬೆಷನರಿ ಐಪಿಎಸ್​ ಅಧಿಕಾರಿ ಹರ್ಷವರ್ಧನ್ ಕೊನೆಯುಸಿರು ಎಳೆದಿದ್ದಾರೆ.

ಮೂಲತಃ ಬಿಹಾರ ಮೂಲದ ಹರ್ಷವರ್ಧನ ಮದ್ಯಪ್ರದೇಶದ ಸಿಂಗ್ರುಲಿಯಲ್ಲಿ ವಾಸವಾಗಿದ್ದರು. ಅಖಿಲೇಶ್ ಕುಮಾರ್ ಸಿಂಗ್ ಹಾಗೂ ಡೋಲಿ ಸಿಂಗ್ ದಂಪತಿಯ ಪುತ್ರ ಹರ್ಷವರ್ಧನ. ರಾಜ್ಯ ಆಡಳಿತ ಸೇವೆಯಲ್ಲಿರುವ ಸರ್ಕಾರಿ ನೌಕರನ ಮಗನಾಗಿದ್ದ ಹರ್ಷವರ್ಧನ್​ ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದರು. ಸರ್ಕಾರಿ ಕೆಲಸಕ್ಕೂ ಸೇರಿಕೊಂಡಿದ್ದರು. ಆದರೆ, ಜೀವನದ ಗುರಿ ಬೇರೆಯೇ ಆಗಿತ್ತು. 2022ರಲ್ಲಿ ಮೊದಲ ಯತ್ನದಲ್ಲೇ ಯುಪಿಎಸ್​​​ಸಿಯಲ್ಲಿ 153ನೇ ರ‍್ಯಾಂಕ್ ಪಡೆದಿದ್ದರು. ​

ಹರ್ಷವರ್ಧನ್​ ಅವರು ಇಲಾಖಾ ತರಬೇತಿ ಮುಗಿಸಿ ನಾಲ್ಕು ವಾರ ಮೈಸೂರಿನ ಪೋಲಿಸ್ ಅಕಾಡೆಮಿಯಲ್ಲಿ ಟ್ರೈನಿಂಗ್ ಮುಗಿಸಿದ್ದರು. ನಂತರ, ಅವರು ಹಾಸನ ಜಿಲ್ಲೆಗೆ ಡಿವೈಎಸ್​ಪಿಯಾಗಿ ನಿಯೋಜನೆಗೊಂಡಿದ್ದರು. ಹೀಗಾಗಿ ಹಾಸನ ಜಿಲ್ಲಾ ಎಸ್​ಪಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಪೊಲೀಸ್ ಇಲಾಖೆಯ ಜೀಪ್​​ ಹತ್ತಿ ಮೈಸೂರಿನಿಂದ ಹಾಸನದತ್ತ ಬರುತ್ತಿದ್ದರು.

ಹಾಸನ ತಾಲ್ಲೂಕಿನ ಹಾಸನ ಮೈಸೂರು ರಸ್ತೆಯ ರಾಷ್ಟ್ರಿಯ ಹೆದ್ದಾರಿ 373ರ ಕಿತ್ತಾನೆಗಡಿ ಬಳಿ ಅತಿಯಾದ ವೇಗದಲ್ಲಿ ಬರುತ್ತಿದ್ದ ಜೀಪ್ ಸಂಜೆ 4:15ಕ್ಕೆ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಇಳಿದಿದ್ದು, ನಂತರ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು, ಪಲ್ಟಿಯಾಗಿದೆ. ಅಪಘಾತದಲ್ಲಿ ಹರ್ಷವರ್ಧನ್​ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತೀವ್ರ ರಕ್ತಸ್ರಾವವಾಗಿದ್ದರಿಂದ ಮತ್ತು ತಲೆಗೆ ಗಂಭೀರ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *