ಮಂಗಳೂರು:(ಡಿ.3) ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಲ್ಲಿ ಕಾರಿನಲ್ಲಿದ್ದ ಮೂವರ ತಂಡವೊಂದು ಟೋಲ್ ಸಿಬ್ಬಂದಿಗೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆ ನಡೆಸಿದ ಉಳ್ಳಾಲ ನಿವಾಸಿ ಒಬ್ಬನನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: 🌧️ಸುಬ್ರಹ್ಮಣ್ಯ: ಫೆಂಗಲ್ ಚಂಡಮಾರುತ ಆರ್ಭಟ
ಉತ್ತರಪ್ರದೇಶ ನೋಂದಣಿ ಸಂಖ್ಯೆ ಇದ್ದ ಕಾರೊಂದರಲ್ಲಿ ಮಂಗಳೂರಿನಿಂದ ಕೇರಳದ ಕಡೆಗೆ ಐವರು ಯುವಕರ ತಂಡ ತೆರಳುತ್ತಿತ್ತು. ತಲಪಾಡಿ ಟೋಲ್ ಗೇಟ್‌ನಲ್ಲಿ ಟೋಲ್ ಪಾವತಿಸದೆ ಕಾರು ಮುಂದೆ ಚಲಿಸಿದ್ದು,
ಈ ವೇಳೆ ಟೋಲ್ ನಿರ್ವಹಣೆ ನಡೆಸುವ ಇಜಿಎಸ್ ಸಂಸ್ಥೆ ಉದ್ಯೋಗಿ ಕಾರಿನ ಹಿಂಭಾಗಕ್ಕೆ ಕೈಯಿಂದ ಬಡಿದಿದ್ದಾನೆ. ಇದರಿಂದ ಸಿಟ್ಟಾದ ತಂಡ ಕಾರನ್ನು ನಿಲ್ಲಿಸಿ ಸಿಬ್ಬಂದಿಯತ್ತ ದೌಡಾಯಿಸಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಟೋಲ್ ಸಿಬ್ಬಂದಿ ಮನು, ಸುಧಾಮ, ಅಮನ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಲ್ಲೆ ನಡೆಸಿದವರು ಮೂವರು ಉಳ್ಳಾಲ ನಿವಾಸಿಗಳಾಗಿದ್ದು, ಝುಲ್ಪಾನ್, ನಿಫಾನ್, ಫಯಾಝ್ ಎಂದು ಗುರುತಿಸಲಾಗಿದೆ. ಒಬ್ಬನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.