ಉಜಿರೆ (ಡಿ.13): ವ್ಯಕ್ತಿಗತ ಬೆಳವಣಿಗೆಯೊಂದಿಗೆ ನಂಟು ಹೊಂದಿರುವ ಸಾಮಾಜಿಕ ಅಭ್ಯುದಯದ ಆಯಾಮಗಳನ್ನು ಶೋಧಿಸುವ ಅಂತಃಸತ್ವದೊಂದಿಗೆ ಭಾರತೀಯ ಶೈಕ್ಷಣಿಕ ವ್ಯವಸ್ಥೆ ಗುರುತಿಸಿಕೊಂಡಿದೆ. ಈ ಬಗೆಯ ವ್ಯವಸ್ಥಿತ ಬದ್ಧತೆಯು ಜಗತ್ತಿಗೆ ಕ್ಷೇಮಾಭ್ಯುವದಯದ ಮೌಲಿಕ ಮಾದರಿಗಳ ಕೊಡುಗೆಯನ್ನು ನೀಡುತ್ತಿದೆ ಎಂದು ಅಮೆರಿಕಾದ ವಿಸ್ಕಾನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್
ಆಫ್ ಏಜಿಂಗ್‍ನ ನಿರ್ದೇಶಕಿ, ಮನಃಶಾಸ್ತ್ರಜ್ಞೆ ಡಾ.ಕ್ಯಾರೊಲ್.ಡಿ.ರಿಫ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್
ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಮನೋವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಬೆಳ್ಳಿಹಬ್ಬದ ಪ್ರಯುಕ್ತ ಬ್ರೇಕಿಂಗ್ ಬ್ಯಾರಿಯರ್ಸ್: ಅಡ್ವಾನ್ಸಿಂಗ್ ಸೈಕಲಾಜಿಕಲ್ ವೆಲ್‍ಬೀಯಿಂಗ್ ಅಕ್ರಾಸ್ ಬಾರ್ಡರ್ಸ್ ಶೀರ್ಷಿಕೆಯಡಿ ಆಯೋಜಿಸಿದ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಆಶಯ ಭಾಷಣ ಪ್ರಸ್ತುತಪಡಿಸಿ ಅವರು ಮಾತನಾಡಿದರು.
ಭಾರತವು ಸಾಂಪ್ರದಾಯಿಕ ಆಚರಣೆಗಳಲ್ಲಿ ಅನುಕರಣೀಯ ಮಾದರಿಗಳನ್ನು ಸೃಷ್ಟಿಸಿದೆ. ಇದು ವಿನೂತನ ಶೈಕ್ಷಣಿಕ ಬದ್ಧತೆಯನ್ನು ರೂಪಿಸಿದೆ. ಈ ಮೂಲಕ ಶೈಕ್ಷಣಿಕ ಸಂಸ್ಥೆಗಳು ವ್ಯಕ್ತಿಗತ, ಸಾಮುದಾಯಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಅಭ್ಯುದಯದ ಹಾದಿಯನ್ನು ತೀವ್ರಗೊಳಿಸುವುದಕ್ಕೆ ಸಾಧ್ಯವಾಗುತ್ತಿರುವುದು ಶ್ಲಾಘನೀಯ ಅಂಶ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಮನೋವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಬೆಳ್ಳಿಹೆಜ್ಜೆಯ ಕಾರ್ಯಕ್ರಮಕ್ಕಾಗಿ ಭಾರತಕ್ಕೆ ತಾವು ಮೊದಲ ಭೇಟಿ ನೀಡಿದ ಘಳಿಗೆ ಸ್ಮರಣಾರ್ಹ ಎಂದ ಅವರು ಎಸ್.ಡಿ.ಎಂನ ಶೈಕ್ಷಣಿಕ ಸಂಸ್ಕøತಿಯ ಸಾಮಾಜಿಕ ವೈಶಿಷ್ಠ್ಯತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮನೋವಿಜ್ಞಾನದ ಅಧ್ಯಯನ ಮತ್ತು ಸಂಶೋಧನಾ ವಲಯದಲ್ಲಿ 25 ವರ್ಷಗಳ ಅವಧಿಯಲ್ಲಿ ಸಾಮುದಾಯಿಕ ನೆಲೆಗಟ್ಟಿನಲ್ಲಿ ಮಹತ್ವದ ಕೊಡುಗೆಗಳನ್ನು ನೀಡುತ್ತಿರುವ ಎಸ್.ಡಿ.ಎಂ ಮನೋವಿಜ್ಞಾನ ವಿಭಾಗದ ವಿಶೇಷತೆಯನ್ನು ಶ್ಲಾಘಿಸಿದರು. ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಕ್ಷೇಮವನದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಶ್ರೀಮತಿ ಶ್ರದ್ಧಾ ಅಮಿತ್ ಅಭ್ಯುದಯದ ವಲಯದಲ್ಲಿ ಮನೋವಿಜ್ಞಾನ ಮೌಲಿಕ ಪಾತ್ರವನ್ನು ನಿರ್ವಹಿಸುತ್ತಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆಯ ಭಾಗವಾಗಿ ಗೆಳತಿ ವಿಭಾಗದ ಏಳು ಕೇಂದ್ರಗಳು ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಮನೋವಿಜ್ಞಾನದ ಶೈಕ್ಷಣಿಕ ಚಿಂತನೆಯ ಆಲೋಚನಾ ಕ್ರಮಗಳು ಈ ಕೇಂದ್ರಗಳ ನಿರ್ವಹಣೆಗೆ ನೆರವಾಗುತ್ತಿವೆ ಎಂದು ಹೇಳಿದರು.
ಮುಖ್ಯ ಅತಿಥಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅವರು ಮಾತನಾಡಿದರು. ಎಸ್.ಡಿ.ಎಂ ಮನೋವಿಜ್ಞಾನ ವಿಭಾಗದ ಸಂಸ್ಥಾಪನೆಯ
ಹಿಂದಿನ ಚೈತನ್ಯ ಶಕ್ತಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ರಾಜ್ಯ ಮತ್ತು ರಾಷ್ಟ್ರದ ವಿವಿಧೆಡೆಗಳಿಂದ ಆಗಮಿಸುವ ಜನರ ದೈನಂದಿನ ಜೀವನದ ಬಿಕ್ಕಟ್ಟುಗಳನ್ನು ನಿವಾರಿಸುವ ಮಾರ್ಗಗಳನ್ನು ತೋರುವ ಧಾರ್ಮಿಕ-ದೈವಿಕ ಆಪ್ತಸಮಾಲೋಚನಾ ಮಾದರಿಯೊಂದನ್ನು ಸೃಷ್ಟಿಸಿದ್ದಾರೆ ಎಂದರು. ಈ ಮೂಲಕ ಮನೋವಿಜ್ಞಾನ
ವಲಯಕ್ಕೆ ಬೇಕಾಗುವ ಅಪರೂಪದ ಆಪ್ತ ಸಮಾಲೋಚನೆಯ ನಮೂನೆಯನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ ಎಂದು ಡಾ.ಸತೀಶ್ಚಂದ್ರ ಎಸ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗಡೆ ಬಿ.ಎ ಅವರು ಮಾತನಾಡಿದರು. ದೈಹಿಕ ಮತ್ತು ಮಾನಸಿಕ ಆರೋಗ್ಯವು ಮನುಷ್ಯನ ಕ್ಷೇಮಾಭ್ಯುದಯದ ಹಾದಿಯಲ್ಲಿ ವಹಿಸುವ ನಿರ್ಣಾಯಕ ಪಾತ್ರವನ್ನು ದೃಷ್ಟಿಯಲ್ಲಿರಿಸಿಕೊಂಡು ಮನೋವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಲಯದ ಬೌದ್ಧಿಕ, ಸೈದ್ಧಾಂತಿಕ
ಸಾಧ್ಯತೆಗಳು ವಿಸ್ತರಣೆಗೊಳ್ಳುತ್ತವೆ ಎಂದರು. ಬಹಳಷ್ಟು ಮನುಷ್ಯ ಬಿಕ್ಕಟ್ಟುಗಳು ದೈಹಿಕ ಸದೃಢತೆ ಮತ್ತು ಮಾನಸಿಕ ಸ್ಥಿರತೆಗೆ ಸಂಬಂಧಪಟ್ಟಿವೆ. ಶರೀರ ಮತ್ತು ಮನಸ್ಸಿನ ಎಚ್ಚರದ ಸಂಯೋಜಿತ ವಿವೇಕವು ಎಲ್ಲಾ ಬಿಕ್ಕಟ್ಟುಗಳಿಗೆ ಪರಿಹಾರ ಒದಗಿಸುತ್ತದೆ. ಈ ನೆಲೆಯಲ್ಲಿ ಎಸ್.ಡಿ.ಎಂ ಮನೋವಿಜ್ಞಾನ ವಿಭಾಗವು ಮಹತ್ವದ ಕೊಡುಗೆಗಳನ್ನು ನೀಡುತ್ತಿರುವುದು ಪ್ರಶಂಸನೀಯ ಎಂದರು. ವಿಶ್ರಾಂತ ಪ್ರಾಧ್ಯಾಪಕಿ, ಎಸ್.ಡಿ.ಎಂ ಮನೋವಿಜ್ಞಾನ ವಿಭಾಗದಲ್ಲಿ 18 ವರ್ಷಗಳ ಕಾಲ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಡಾ..ಎಂ.ವೈ.ಮಂಜುಳಾ ವಿಭಾಗದ ಸಾಧನೆಯ ಪ್ರಮುಖ ಮೈಲಿಗಲ್ಲುಗಳನ್ನು ಸ್ಮರಿಸಿದರು. ಡಾ.ಸುಮಿತ್ ದತ್ತಾ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಿಲ್ವರ್ ಥ್ರೆಡ್ಸ್ ಆಫ್ ಥಾಟ್ಸ್ ಎಂಬ ಸಾಕ್ಷಚಿತ್ರವನ್ನು ಕ್ಷೇಮವನದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಶ್ರೀಮತಿ ಶ್ರದ್ಧಾ ಅಮಿತ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಇದೇ ಸಂದರ್ಭದಲ್ಲಿ ಕಳೆದ 25 ವರ್ಷಗಳ ಅವಧಿಯಲ್ಲಿ ವಿಭಾಗದಲ್ಲಿ ಸೇವೆ ಸಲ್ಲಿಸಿದ ಪ್ರಾಧ್ಯಾಪಕರನ್ನು ಸನ್ಮಾನಿಸಲಾಯಿತು. ವಿಭಾಗದ ಮುಖ್ಯಸ್ಥೆ ಡಾ.ವಂದನಾ.ಜೈನ್ ಸ್ವಾಗತಿಸಿದರು ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಅಶ್ವಿನಿ ಶೆಟ್ಟಿ ವಂದಿಸಿದರು. ವಿದ್ಯಾರ್ಥಿಗಳಾದ ಅಲಿಷಾ ಮತ್ತು ಜಾಹ್ನವಿ ಕಾರ್ಯಕ್ರಮವನ್ನು ನಿರೂಪಿಸಿದರು.