ಉಜಿರೆ:(ಡಿ.15) ಸಾಂದರ್ಭಿಕ ಅಗತ್ಯಕ್ಕೆ ಅನುಗುಣವಾಗಿ ಕಾರ್ಯೋನ್ಮುಖವಾಗುವ ಸಾಮರ್ಥ್ಯ ಮತ್ತು ಕೌಶಲ್ಯಗಳಿಂದ ಹೊಸ ಪ್ರಯೋಗಗಳು ಸಾಧ್ಯವಾಗುತ್ತವೆ ಎಂದು ಬೆಂಗಳೂರಿನ ಕ್ಷೇಮವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಶ್ರದ್ಧಾ ಅಮಿತ್ ಹೇಳಿದರು.
ಇದನ್ನೂ ಓದಿ: Aries to Pisces: ಮೇಷ ರಾಶಿಯವರ ದಾಂಪತ್ಯದಲ್ಲಿ ನಂಬಿಕೆ ಹೆಚ್ಚಾಗುವುದು!!!!
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ಸಂಪಾದಕರು ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ವರದಿಗಳು ಹಾಗೂ ವಿಶೇಷ ಬರಹಗಳ ಸಂಕಲನ ‘ದೀಪಸಮನ್ವಯ’ ಮತ್ತು ವಿಡಿಯೋ ಹಾಗೂ ಡಿಜಿಟಲ್ ಕಂಟೆಂಟ್ಗಳನ್ನು ಒಳಗೊಂಡಿರುವ ‘ದೀಪ ದೃಶ್ಯ’ ವಿಶೇಷ ಸಂಚಿಕೆಗಳನ್ನು ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿವರ್ಷ ಆಯೋಜಿತವಾಗುವ ಲಕ್ಷದೀಪೋತ್ಸವದ ವಿಶೇಷತೆಗಳಿಗೆ ‘ದೀಪ ಸಮನ್ವಯ’ ಮತ್ತು ‘ದೀಪ ದೃಶ್ಯ’ ಸಂಚಿಕೆಗಳು ಕನ್ನಡಿ ಹಿಡಿಯುತ್ತವೆ. ಈ ಬಗೆಯ ಸೃಜನಶೀಲ ತೊಡಗಿಸಿಕೊಳ್ಳುವಿಕೆಯಿಂದ ವೃತ್ತಿಪರ ಅವಕಾಶಗಳು ಲಭ್ಯವಾಗುತ್ತವೆ. ವಿಭಾಗದ ಪ್ರಯೋಗಶೀಲ ಹೆಜ್ಜೆಗಳು ಪ್ರಶಂಸನೀಯ ಎಂದರು.
ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ ಕುಮಾರ ಹೆಗ್ಡೆ ಮಾತನಾಡಿದರು. ವಿದ್ಯಾರ್ಥಿಗಳು ಸೂಕ್ಷ್ಮಗ್ರಾಹಿಗಳಾದಾಗ ತಾಂತ್ರಿಕ ಮತ್ತು ಭೌದ್ಧಿಕ ನೈಪುಣ್ಯತೆ ಹೊಂದಲು ಸಾಧ್ಯವಾಗುತ್ತದೆ. ತಾತ್ವಿಕ ವಿಷಯಗಳ ಕಲಿಕೆಯಿಂದ ಯಶಸ್ವೀ ವೃತ್ತಿಬದುಕನ್ನು ಕಟ್ಟಿಕೊಳ್ಳಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ. ವಿರಾಟ್ ಪದ್ಮನಾಭ ಅವರು ರಚಿಸಿರುವ ‘ಬೆಟ್ಟದ ಹೂವು: ಆಧುನಿಕ ಭಾರತದ ಸಾಮಾಜಿಕ ರಾಮಾಯಣ’ ಕೃತಿಯ ರಕ್ಷಾಪುಟವನ್ನು ಶ್ರೀಮತಿ ಶ್ರದ್ಧಾ ಅಮಿತ್ ಅನಾವರಣಗೊಳಿಸಿದರು.
ಲಕ್ಷದೀಪೋತ್ಸವದ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಕುರಿತು ‘ಗುಣಗಣಿ – ಗುಣರತ್ನಗಳ ಧಣಿ’ ಶೀರ್ಷಿಕೆಯಲ್ಲಿ ಬಿಡುಗಡೆಗೊಂಡ ಕೃತಿಯ ಲೇಖಕರಾದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಸುನಿಲ್ ಹೆಗ್ಡೆ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳ ರಚನಾತ್ಮಕ ಸೃಜನಶೀಲತೆಯ ಮಹತ್ವದ ಹೆಜ್ಜೆಗಳ ವಿವರ ನೀಡಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ. ಪಿ , ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದಿವ್ಯಶ್ರೀ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ನೈದಿಲೆ ವಂದಿಸಿದರು.