ಕೊಕ್ಕಡ:(ಡಿ.16) ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಕೊಕ್ಕಡದಲ್ಲಿ ನಡೆದಿದೆ.
ಕೊಕ್ಕಡ ಸಮೀಪದ ಕಾಪಿನಬಾಗಿಲು ಎಂಬಲ್ಲಿ ಅಯ್ಯಪ್ಪ ಯಾತ್ರಾರ್ಥಿಗಳ ಬಸ್ಸಿನಡಿಗೆ ಬೈಕ್ ಬಿದ್ದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದು ,
ಮೃತ ಬೈಕ್ ಸವಾರನನ್ನು ಮೂಡುಬೈಲು ನಿವಾಸಿ ಮಾಧವ ಆಚಾರ್ಯ (46) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶ ಮೂಲದ ಅಯ್ಯಪ್ಪ ಮಾಲಾಧಾರಿಗಳು ಧರ್ಮಸ್ಥಳದಿಂದ ಸುಭ್ರಹ್ಮಣ್ಯಕ್ಕೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು,
ಕೊಕ್ಕಡದಿಂದ ಮೂಡುಬೈಲಿನ ತನ್ನ ಮನೆಗೆ ಹೋಗುತ್ತಿದ್ದ ಮಾಧವ ಆಚಾರ್ಯರ ಬೈಕ್ ಕಾಪಿನಬಾಗಿಲು ಬಳಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರನ ತಲೆಗೆ ಗಂಭೀರ ಗಾಯವಾಗಿದ್ದು,
ತಕ್ಷಣ ಅವರನ್ನು ಆಂಬುಲೆನ್ಸ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತ ಮಾಧವ ಆಚಾರ್ಯರು ಕಾರ್ಪೆಂಟರ್ (ಮರದ ಕೆಲಸ) ಮಾಡುತ್ತಿದ್ದರು. ಈ ಬಗ್ಗೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.