ಮುಂಬೈ:(ಡಿ.19) ಮುಂಬೈ ಗೇಟ್ ಬಳಿ ಸಮುದ್ರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೋಣಿ ಮುಳುಗಿದ್ದು, 13 ಜನರು ಸಾವನ್ನಪ್ಪಿರುವ ಘಟನೆ ಬುಧವಾರ (ಡಿ.18) ನಡೆದಿದೆ.
ಮುಂಬೈಯ ಐಕಾನಿಕ್ ಗೇಟ್‌ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ದ್ವೀಪ ಕ್ಕೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ನೀಲ್ ಕಮಲ್ ಹೆಸರಿನ ಬೋಟ್‌ಗೆ ಸ್ಪೀಡ್ ಬೋಟ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಬೋಟ್ ಅಪಘಾತದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ನೀಲ್ ಕಮಲ್ ಬೋಟ್ ಒಟ್ಟು 110 ಜನರನ್ನು ಹೊತ್ತೊಯ್ಯುತ್ತಿತ್ತು ಎನ್ನಲಾಗಿದೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 13 ಮಂದಿ ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಉಳಿದ 94 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಈ ಹಿಂದೆ ಬೋಟ್ ಇದ್ದಕ್ಕಿದ್ದಂತೆ ಮುಳುಗಲು ಕಾರಣವೇನು ಎನ್ನುವುದು ಗೊತ್ತಾಗಿರಲಿಲ್ಲ. ಇದೀಗ ಸ್ಪೀಡ್ ಬೋಟ್ ಡಿಕ್ಕಿ ಹೊಡೆಯುವ ದೃಶ್ಯ ಹೊರ ಬಂದಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರಿಕಾ ದೋಣಿಗಳ ಸಹಾಯದಿಂದ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಸಿಎಂ ದೇವೇಂದ್ರ ಫಡ್ನವಿಸ್ ಸ್ಪಷ್ಟನೆ
‘ಮುಂಬಯಿ ಬಳಿ ಬುಚರ್ ಐಲ್ಯಾಂಡ್‌ನಲ್ಲಿ ಮಧ್ಯಾಹ್ನ 3.55ರ ವೇಳೆಗೆ ನೌಕಾಪಡೆಯ ಬೋಟ್ ‘ನೀಲ್‌ಕಮಲ್’ ಹೆಸರಿನ ದೋಣಿಗೆ ಡಿಕ್ಕಿ ಹೊಡದು ಅವಘಡ ಸಂಭವಿಸಿದೆ. ಸಂಜೆ 7.30ರ ಮಾಹಿತಿ ಪ್ರಕಾರ 101 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. 10 ಮಂದಿ ಪ್ರಯಾಣಿಕರು ಹಾಗೂ 3 ಮಂದಿ ನೌಕಾಪಡೆಯ ಸಿಬ್ಬಂದಿ ಸೇರಿ ಒಟ್ಟು ದುರಂತದಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಶೋಧಕಾರ್ಯ ಮುಂದುವರಿದಿದೆ. ನಾಪತ್ತೆಯಾದವರ ಹೆಚ್ಚಿನ ವಿವರ ನಾಳೆ ಬೆಳಗ್ಗೆ ಲಭ್ಯವಾಗಲಿದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾಹಿತಿ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ರೂ. ಘೋಷಣೆಯಾಗಿದೆ.