Fri. Dec 27th, 2024

Kundapur: ಅಂಬರ್ ಗ್ರೀಸ್ ಮಾರಾಟ ಜಾಲದ ಕಾರ್ಯಾಚರಣೆ ವೇಳೆ FMS ಅಧಿಕಾರಿಗಳ ಮೇಲೆ ಹಲ್ಲೆ – ನಾಲ್ವರು ಆರೋಪಿಗಳನ್ನು ಬಂಧಿಸಿದ ಕುಂದಾಪುರ ಪೋಲಿಸರು!!

ಕುಂದಾಪುರ:(ಡಿ.22) ತಿಮಿಂಗಿಲದ ವಾಂತಿ ಮಾರಾಟ ಜಾಲದ ಕಾರ್ಯಾಚರಣೆಗೆ ಬೆಂಗಳೂರು ಸಿಐಡಿ ಅರಣ್ಯ ಸಂಚಾರಿ ದಳದ (FMS) ಅಧಿಕಾರಿಗಳ ತಂಡವೊಂದು ಡಿ.18 ರಂದು ಬುಧವಾರ ಕೋಡಿ ಕಡಲ ತೀರದ ಸಮೀಪದ ಎಂಕೋಡಿಯ ಸೌಹಾರ್ದ ಭವನಕ್ಕೆ ಮಾರುವೇಷದಲ್ಲಿ ಬಂದು ದಾಳಿ ನಡೆಸಿದೆ. ಈ ವೇಳೆ ಆರೋಪಿಗಳು ಸಹಿತ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಹಲ್ಲೆಗೊಳಗಾದ ಎಫ್.ಎಮ್.ಎಸ್ ಅಧಿಕಾರಿಗಳು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಕಟಪಾಡಿ: ಎಸ್‌ ವಿ ಕೆ/ಎಸ್‌ ವಿ ಎಸ್‌ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಪೋಷಕರ ಕ್ರೀಡಾಕೂಟ

ಏನಿದು ಘಟನೆ?
ಬುಧವಾರ ಮಧ್ಯಾಹ್ನದ ಸುಮಾರಿಗೆ ಅರಣ್ಯ ಸಂಚಾರಿ ದಳದವರು 3 ಕಾರಿನಲ್ಲಿ ಕಾರ್ಯಾಚರಣೆ ನಡೆಸಲು ಬಂದಿದ್ದರು. ಈ ವೇಳೆ ನಾಲ್ವರನ್ನು ವಶಕ್ಕೆ ಪಡೆದು ಕಾರಿನಲ್ಲಿ ಕರೆದುಕೊಂಡು ಹೋಗುವ ವೇಳೆ ಇವರು ಮಾರುವೇಷದಲ್ಲಿ ಇದ್ದುದರಿಂದ ಸ್ಥಳೀಯರು ಮತ್ತು ಆರೋಪಿಗಳು ಸೇರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿ 7 ಮಂದಿ ಆರೋಪಿಗಳು ಇದ್ದು, ಒಬ್ಬನಲ್ಲಿ 10 ಕೆ.ಜಿ. ತೂಕದ ಅಂಬರ್‌ಗ್ರೀಸ್ ಇದ್ದು ಮತ್ತೊಬ್ಬ ಆರೋಪಿ ಹಿಡಿದುಕೊಂಡು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕಾರ್ಯಾಚರಣೆ ತಂಡದಲ್ಲಿ ಮಂಗಳೂರು ವಿಭಾಗದ ಅರಣ್ಯ ಸಂಚಾರಿ ದಳದ ಸಬ್ ಇನ್ಸ್ಪೆಕ್ಟರ್ ಜಾನಕಿ, ಸಿಬ್ಬಂದಿಗಳಾದ ತಾರಾನಾಥ, ಅಬ್ದುಲ್ ರೌಫ್, ಶಿವಾನಂದ,ಚಾಲಕ ಜಗದೀಶ್ ಸಾಲ್ಯಾನ್, ಬೆಂಗಳೂರು ವೈಲ್ಡ್‌ ಲೈಫ್ ಕಂಟ್ರೋಲ್ ಬ್ಯೂರೋದ ಪ್ರಸಾದ್ ಎಸ್, ಮಾಹಿತಿದಾರರಾದ ಶಾಬಾಸ್, ಶಂಕರ್ ಇದ್ದರು. ಗಾಯಗೊಂಡವರು ಕುಂದಾಪುರದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಯಕರ, ರತ್ನಾಕರ, ಅಬೂಬಕರ್ ಅಸಿಫ್, ಹೆಸರು ತಿಳಿಯದ ಮೂವರು ಸಹಿತ ಹಲವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.


ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕುಂದಾಪುರ ಎಸ್‌ಐ ನಂಜಿ ನಾಯ್ಕ, ಸಿಬ್ಬಂದಿ ಉಪಸ್ಥಿತರಿದ್ದರು. ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಭದ್ರತೆ ನೀಡಲಾಗಿತ್ತು. ಮಂಗಳೂರು ಅರಣ್ಯ ಸಂಚಾರಿ ದಳದ (FMS) ಸಬ್ ಇನ್ಸ್ಪೆಕ್ಟರ್ ಜಾನಕಿ ಮತ್ತು ತಂಡದ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಪೈಕಿ ನಾಲ್ವರನ್ನು ಕುಂದಾಪುರ ಪೊಲೀಸರನ್ನು ಡಿ.20 ರಂದು ಬಂಧಿಸಿದ್ದಾರೆ.


ಆರೋಪಿಗಳಾದ ಕೋಡಿಯ ನಿವಾಸಿಗಳಾದ ಅಬೂಬಕ್ಕರ್ (50), ಹಸೈನಾರ್ (57), ಉಬದುಲ್ಲಾ (40) ಹಾಗೂ ಬೈಂದೂರಿನ ಮಹಮ್ಮದ್ ಅಲಿ (50) ಬಂಧಿತರು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *