ನೆಲಮಂಗಲ:(ಡಿ.22) ವಿಧಿಯಾಟವೇ ಹಾಗೆ, ಈಗಿದ್ದ ಜೀವ ಇನ್ನೊಂದು ಕ್ಷಣದಲ್ಲಿ ಇರುತ್ತೆ ಅಂತಾ ಹೇಳುವುದಕ್ಕೆ ಆಗಲ್ಲ. ಇದೇ ರೀತಿಯ ಘಟನೆಯೊಂದು ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಹೆದ್ದಾರಿಯಲ್ಲಿ ಯಮಸ್ವರೂಪಿಯಾಗಿ ಬಂದ ಲಾರಿಯೊಂದು ಇಡೀ ಕುಟುಂಬದ 6 ಜೀವಗಳನ್ನು ಬಲಿ ಪಡೆದಿರುವಂತಹ ಘಟನೆ ನಡೆದಿದೆ. ತಂದೆಗೆ ಹುಷಾರಿಲ್ಲ ಅಂತ ಕುಟುಂಬ ಸಮೇತ ಊರಿಗೆ ಹೊರಟಿದ್ದವರು ಮಸಣ ಸೇರಿದ್ದಾರೆ.
ಪತಿ ಚಂದ್ರಮ್ ಏಗಪ್ಪಗೋಳ್(46), ಪತ್ನಿ ಧೋರಾಬಾಯಿ(40), ಪುತ್ರ ಗ್ಯಾನ್(16), ಪುತ್ರಿಯರಾದ ದೀಕ್ಷಾ(10), ಆರ್ಯ(6) ಚಂದ್ರಮ್ ಏಗಪ್ಪಗೋಳ್ ಸಹೋದರನ ಪತ್ನಿ ವಿಜಯಲಕ್ಷ್ಮೀ(35) ಮೃತಪಟ್ಟವರು.
ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಮೂಲದವರಾದ ಚಂದ್ರಮ್ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಿದ್ದರು. ಐಎಎಸ್‌ಟಿ ಸಾಫ್ಟ್ ವೇರ್ ಕಂಪನಿ ಮಾಲೀಕರಾಗಿದ್ದರು. ತಂದೆಗೆ ಹುಷಾರಿಲ್ಲ ಅಂತ ಕುಟುಂಬ ಸಮೇತ ವಿಜಯಪುರಕ್ಕೆ ಹೊರಟಿದ್ದರು.
ಬೆಂಗಳೂರಿನ ನೆಲಮಂಗಲ ತಾಲೂಕಿನ ತಾಳೆಕೆರೆ ಬಳಿ ಪಕ್ಕದ ರಸ್ತೆಯಿಂದ ಏಕಾಏಕಿ ಮೇಲೆರಗಿ ಬಂದ ಲಾರಿ ಚಂದ್ರಮ್ ಕುಟುಂಬ ಪ್ರಯಾಣಿಸ್ತಿದ್ದ ಕಾರಿನ ಮೇಲೆ ಬಿದ್ದಿತ್ತು. ಲಾರಿ ಬಿದ್ದ ರಭಸಕ್ಕೆ ಕಾರು ಅಪ್ಪಚ್ಚಿಯಾಗಿತ್ತು. ಕಾರಿನಲ್ಲಿದ್ದ 6 ಜೀವಗಳು ಕ್ಷಣಮಾತ್ರದಲ್ಲಿ ಉಸಿರು ಚೆಲ್ಲಿವೆ.
ಬೆಳಿಗ್ಗೆ 11 ಗಂಟೆಗೆ ಸಮಯದಲ್ಲಿ ಬೆಂಗಳೂರು ತುಮಕೂರು ಎನ್‌ಹೆಚ್ 48 ಹೈವೆ ರಸ್ತೆ ತಿಪ್ಪಗೊಂಡನಹಳ್ಳಿ ಹತ್ತಿರ KA. 06.AB. 0645 ಈಚರ್ ಕ್ಯಾಂಟರ್ ವಾಹನ ಬೆಂಗಳೂರು ಕಡೆಯಿಂದ ತುಮಕೂರು ಕಡೆಗೆ ಹೋಗುವಾಗ ಅದೇ ಸಮಯದಲ್ಲಿ ಕ್ಯಾಂಟರ್‌ನ ಹಿಂದೆ KA. 01.ND. 1536 ವೋಲ್ವೋ ಕಾರು ಬರುತ್ತಿದ್ದಾಗ ಇದೇ ಸಮಯದಲ್ಲಿ ಬೆಂಗಳೂರು ಕಡೆಗೆ ಹೋಗಲು ಬಂದ KA. 52.B. 3076 ಲಾರಿಯನ್ನು ಕಂಟೇನರ್ ಲಾರಿ ಚಾಲಕ ತನ್ನ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಬಂದು ರಸ್ತೆಯ ಮಧ್ಯದ ಮೀಡಿಯನ್ ಹತ್ತಿಸಿ ಬೆಂಗಳೂರು ತುಮಕೂರು ರಸ್ತೆಗೆ ಬಂದು ರಸ್ತೆಯಲ್ಲಿ ಬರುತ್ತಿದ್ದ ಕ್ಯಾಂಟರ್ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ವೋಲ್ವೋ ಕಾರಿನ ಮೇಲೆ ಲಾರಿ ಪಲ್ಟಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಅಪ್ಪಚ್ಚಿ ಆಗಿದೆ.
ಚಂದ್ರಮ್ ಕಂಪನಿ ಸಿಬ್ಬಂದಿ ಶ್ರೀನಿವಾಸ್ ಎಂಬುವವರು ಪ್ರತಿಕ್ರಿಯಿಸಿದ್ದು, ತಂದೆ ಹುಷಾರಿಲ್ಲ ಅಂತ ಕುಟುಂಬ ಸಮೇತ ಊರಿಗೆ ಹೊರಟಿದ್ದರು. ಇವರ ಜೊತೆಗೆ ತಮ್ಮನ ಪತ್ನಿ ಹಾಗೂ ಅವರ ಮಗು ಎಲ್ಲರೂ ಇದ್ದರು. ಏನೂ ತಪ್ಪೇ ಮಾಡದೆ ತಮ್ಮ ಪಾಡಿಗೆ ಅವರು ಕಾರಿನಲ್ಲಿ ಹೋಗುತ್ತಿದ್ದರು. ದುರ್ದೈವ ಈ ರೀತಿಯಲ್ಲಿ ಸಾವು ಸಂಭವಿಸಿದೆ. ತುಂಬಾ ದುಃಖ ಆಗುತ್ತಿದೆ ಎಂದಿದ್ದಾರೆ.