ಉಡುಪಿ(ಜ.4): ವ್ಯಕ್ತಿಯೊಬ್ಬರು ವಾಸವಾಗಿರುವ ಮನೆಯಹೊರಗಡೆ ಜಂತಿಗೆ ನೇಣುಬಿಗಿದು ಆತ್ಮಹತ್ಯೆಗೈದಿರುವ ಘಟನೆ ಶುಕ್ರವಾರ ರಾತ್ರಿ ಕೊರಂಗ್ರಪಾಡಿಯಲ್ಲಿ ನಡೆದಿದೆ. ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಮೃತ ವ್ಯಕ್ತಿಯನ್ನು ವಸಂತ ಕೋಟ್ಯಾನ್(59) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮೃತರು, ಕ್ಯಾಟರಿಂಗ್ ವ್ಯವಹಾರ ನಡೆಸುತ್ತಿದ್ದರು. ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬರೆದಿಟ್ಟಿರುವ ಚೀಟಿ ಪೋಲಿಸರಿಗೆ ಲಭ್ಯವಾಗಿದೆ.
ಘಟನಾ ಸ್ಥಳದಲ್ಲಿದ್ದು ಪಿ.ಎಸ್.ಐ ಪುನೀತ್ ಕುಮಾರ್, ತನಿಖಾ ಸಹಾಯಕಿ ನೇತ್ರಾವತಿ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡುವರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಜಿಲ್ಲಾಸ್ಪತ್ರೆಗೆ ಸಾಗಿಸಲು ನೆರವಾದರು.
ಡೆತ್ ನೋಟ್ ನಲ್ಲಿ ಏನಿದೆ?
ನಾನು 1 ವರ್ಷದ ಹಿಂದೆ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಯತ್ನಿಸಿದೆ, ಆದರೆ ಗುಣಮುಖವಾಗಿ ಬಂದಿದ್ದೇನೆ. ತದನಂತರ ನನ್ನ ಕಾಲಿನ ಬಲಹೀನತೆ ಅಯಿತು. ಅಂದಿನಿಂದ ಇಂದಿನವರೆಗೆ ನಡೆಯಲಾರದೆ ಇದ್ದೆ. ಇತ್ತೀಚಿನ ದಿನದಿಂದ ನನಗೆ ಜೀವನವೇ ಬೇಡ ಎಂದು ತೀರ್ಮಾನಿಸಿದೆ. ಕಾರಣ ನನ್ನ ಬಗ್ಗೆ ಮಾಡಿದ ಅಪಪ್ರಚಾರದಿಂದ ನನ್ನ ಸಂಬಂಧಿಕರು ದೂರ ಆದರು. ಅದಕ್ಕೆ ಕಾರಣ ನನ್ನ ಹೆಂಡತಿ ಸೆಲೆಸ್ಟಿನಾ ಹಾಗೂ ಅವಳ ಸಹಚರರು. ಅವರು ಯಾರೆಂದರೆ ಅಪ್ಪು ಯಾನೆ ಸುಂದರ ಹಾಗೂ ಮುರಳಿ ಕೊರಂಗ್ರಪಾಡಿ. ನನ್ನ ಮಗಳಾದ ಪ್ರಿಯಳನ್ನು ನನ್ನ ಮನೆಗೆ ಬರಲು ಬಿಡಲಿಲ್ಲ. ಅವಳನ್ನು ನೆನೆದು ತುಂಬಾ ದುಃಖವಾಗುತ್ತಿತ್ತು. ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳಲಿ . ನನ್ನನ್ನು ಆಸ್ಪತ್ರೆಯಿಂದ ಸೀದಾ ಗೋರಿಗೆ ತೆಗೆದುಕೊಂಡು ಹೋಗಲಿ. ಮನೆಗೆ ಬರುವುದು ಬೇಡ . ಜನ ಬರುವುದು ಬೇಡ. ನನ್ನ ಸಂಬಂದಿಕರು ಬಂದರೆ ಸಾಕು. ನಾನು ಇಷ್ಟು ಸಮಯದಿಂದ ಈ ಸ್ಥಿತಿಯಲ್ಲಿ ಇರುವಾಗ ಯಾರು ಬರಲಿಲ್ಲ. ಹೂವು ಹಾಕಬಾರದಾಗಿ ವಿನಂತಿ , ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.