ಪಡುಬಿದ್ರೆ(ಜ.09): ಸಾಲಬಾಧೆ ತಾಳಲಾರದೆ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ.
ಇದನ್ನೂ ಓದಿ: Nagpur: ಮಧ್ಯರಾತ್ರಿವರೆಗೆ ವಿವಾಹ ವಾರ್ಷಿಕೋತ್ಸವದ ಪಾರ್ಟಿ
ಪಡುಬಿದ್ರೆ ಬೇಂಗ್ರೆ ರಸ್ತೆಯ ಕೌಸರ್ ಮಂಜಿಲ್‌ನ ನಸ್ರುಲ್ಲಾ(29) ಆತ್ಮಹತ್ಯೆ ಮಾಡಿಕೊಂಡವರು.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ನಸ್ರುಲ್ಲಾ ಅವರು 3 ತಿಂಗಳ ಹಿಂದೆ ಊರಿಗೆ ಮರಳಿದ್ದರು. ನಸ್ರುಲ್ಲಾ ಅವರು ಪಡೆದಿದ್ದ ಮನೆ ಸಾಲ, ವೈಯಕ್ತಿಕ ಸಾಲಗಳನ್ನು ಹಿಂತಿರುಗಿಸಲು ಬ್ಯಾಂಕ್ ನವರು, ಸಾಲದವರು ಆತನ ಮನೆಗೆ ಬಂದು ಹೋಗುತ್ತಿದ್ದರು. ಇದರಿಂದ ಅವರು ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.
ತಮ್ಮ ಪತ್ನಿಯ ಆಭರಣಗಳನ್ನೂ ಅಡವಿಟ್ಟಿದ್ದ ನಸ್ರುಲ್ಲಾ ಬುಧವಾರ ಕೆಲ ಚಿನ್ನಾಭರಣಗಳನ್ನು ಬಿಡಿಸಿಕೊಂಡು ಬಂದಿದ್ದರು. ಬುಧವಾರ ಸಂಜೆಯ ವೇಳೆ ಪತ್ನಿಯೊಂದಿಗೆ ಜಗಳವಾಡಿ, ತನ್ನ ಮೊಬೈಲನ್ನು ಪುಡಿ ಮಾಡಿ ನೇರ ತಮ್ಮ ಬೆಡ್ ರೂಂಗೆ ತೆರಳಿ ಫ್ಯಾನಿಗೆ ಚೂಡಿದಾರದ ದುಪ್ಪಟದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.