ಪುತ್ತೂರು:(ಜ.11) ಬೈಕ್ ನಲ್ಲಿ ಹೋಗುವಾಗ ಅಪಘಾತಕ್ಕೀಡಾದ ದೇವಾಲಯದ ಅರ್ಚಕರೊಬ್ಬರಿಗೆ ಮಸೀದಿಯಲ್ಲಿ ಚಿಕಿತ್ಸೆ ನೀಡಿ ಕೋಮು ಸೌಹಾರ್ದತೆ ಮೆರೆದಂತಹ ಅಪರೂಪದ ಘಟನೆ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬೆಳ್ತಂಗಡಿ: ಬಾರ್ಯ ದೇವಳದ ಪ್ರತಿಷ್ಠಾ ವಾರ್ಷಿಕೋತ್ಸವದ ಆಮಂತ್ರಣ ಬಿಡುಗಡೆ
ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಮುಂಡ್ಯ ಎಂಬಲ್ಲಿರುವ ಶಾಸ್ತಾರ ದೇವಸ್ಥಾನದಲ್ಲಿ ಅರ್ಚಕರಾಗಿರುವ ರಘುರಾಮ ಭಟ್ ಬುಧವಾರ ಬೈಕ್‌ನಲ್ಲಿ ಬರುವಾಗ,
ಕುಂಬ್ರ ಬದ್ರಿಯಾ ಮಸೀದಿಯ ಎದುರು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದು ಗಾಯಗೊಂಡಿದ್ದರು. ಅವರ ಕಾಲಿಗೆ ಗಾಯವಾಗಿ, ರಕ್ತಸ್ರಾವ ಆಗುತ್ತಿತ್ತು. ಆಗ ಗಾಯಗೊಂಡ ಅರ್ಚಕರ ನೆರವಿಗೆ ಮಸೀದಿಯಲ್ಲಿದ್ದವರು ಧಾವಿಸಿ,
ಅವರನ್ನು ಮಸೀದಿಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿ ಉಪಚರಿಸಿದ್ದಾರೆ. ಅಲ್ಲದೆ ರಿಕ್ಷಾ ಚಾಲಕ ಬಶೀರ್ ಕಡ್ತಿಮಾರ್ ಗಾಯಾಳುವನ್ನು ಸ್ಥಳೀಯ ಕ್ಲಿನಿಕ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಲು ನೆರವಾದರು.
ಇನ್ನು ಆಸ್ಪತ್ರೆ ಚಿಕಿತ್ಸೆ ಮುಗಿಸಿ ತನ್ನ ಬೈಕ್ ಇದ್ದ ಮಸೀದಿ ಬಳಿಗೆ ಮರಳಿದ ಅರ್ಚಕ ರಘುರಾಮ್ ಭಟ್ ಅವರು ಸುಮಾರು ಎರಡು ಗಂಟೆಗಳ ಕಾಲ ಮಸೀದಿಯಲ್ಲಿಯೇ ವಿಶ್ರಾಂತಿ ಪಡೆದಿದ್ದು, ಬಳಿಕ ಅವರ ಆಪ್ತರು ಮನೆಗೆ ಕರೆದೊಯ್ದರು ಎಂದು ತಿಳಿದುಬಂದಿದೆ.