ಬೆಳಗಾವಿ (ಜ.14): ಕಾರು ಅಪಘಾತದಲ್ಲಿ ಗಾಯಗೊಂಡಿರುವ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಚಿಕಿತ್ಸೆ ಪಡೆದುಕೊಂಡಿದ್ದು, ಮನೆಗೆ ತೆರಳಿದ್ದು. ವಿಶ್ರಾಂತಿ ಪಡೆದುಕೊಂಡ ನಂತರ ಇದೀಗ ಆಸ್ಪತ್ರೆಗೆ ದೌಡಾಯಿಸಿ ಅಕ್ಕ ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯವನ್ನು ವಿಚಾರಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ,
ಸಂಕ್ರಮಣ ಹಬ್ಬದ ನಿಮಿತ್ತ ಕುಟುಂಬ ಸಮೇತ ಮನೆ ದೇವರಿಗೆ ಹೋಗಲು ರಾತ್ರಿಯೇ ತರಾತುರಿಯಲ್ಲಿ ಬೆಂಗಳೂರು ನಿವಾಸವನ್ನು ಬಿಟ್ಟಿದ್ವಿ. ದುರಾದೃಷ್ಟವಶಾತ್ ಇಂದು ಬೆಳಗ್ಗೆ 5 ಗಂಟೆಗೆ ಎರಡು ನಾಯಿಗಳು ಒಂದರ ಹಿಂದೆ ಒಂದು ಅಡ್ಡ ಬಂದಿದ್ದರಿಂದ ಅಪಘಾತ ಸಂಭವಿಸಿದೆ. ಇನ್ನೇನು 15 ನಿಮಿಷದಲ್ಲಿ ಮನೆಗೆ ಸೇರಲಿದ್ದೆವು. ಅಷ್ಟರಲ್ಲೇ ಈ ದುರಂತ ಸಂಭವಿಸಿದೆ ಎಂದು ಅಪಘಾತದ ಸತ್ಯ ಬಿಚ್ಚಿಟ್ಟರು. ಅಲ್ಲದೇ ಈ ಹಿಂದೆ ಈ ದುರ್ಘಟನೆ ಬಗ್ಗೆ ಭವಿಷ್ಯ ಹೇಳಿದ್ದನ್ನು ಬಹಿರಂಗಪಡಿಸಿದರು.
ಎರಡು ನಾಯಿಗಳ ಅಡ್ಡ ಬಂದಿದ್ದರಿಂದ ಈ ದುರ್ಘಟನೆ:
ನಿನ್ನೆ ಪಕ್ಷದ ಸಿಎಲ್‌ಪಿ ಸಭೆ ಮುಗಿಸಿಕೊಂಡ ರಾತ್ರಿ 11 ಗಂಟೆಗೆ ಬೆಂಗಳೂರಿನ ನಿವಾಸದಿಂದ ಬೆಳಗಾವಿಗೆ ಹೊರಟೆವು. ಇವತ್ತು ಸಂಕ್ರಮಣ ಹಬ್ಬದ ನಿಮಿತ್ತ ಕುಟುಂಬ ಸಮೇತ ಮನೆ ದೇವರಾದ ವೀರಭದ್ರ ದೇವಸ್ಥಾನಕ್ಕೆ ಹೋಗಲು ನಿರ್ಧಾರ ಮಾಡಿದ್ದೆವು. ರಾತ್ರಿಯೇ ತರಾತುರಿಯಲ್ಲಿ ಬೆಂಗಳೂರು ನಿವಾಸವನ್ನು ಬಿಟ್ಟೆವು. ದುರಾದೃಷ್ಟವಶಾತ್ ಬೆಳಗ್ಗೆ 5 ಗಂಟೆಗೆ ಅಪಘಾತ ಸಂಭವಿಸಿದೆ. ಇನ್ನೇನು 15 ನಿಮಿಷದಲ್ಲಿ ಮನೆಗೆ ಸೇರಲಿದ್ದೆವು. ಆದರೆ ಮಾರ್ಗ ಮಧ್ಯ ಎರಡು ನಾಯಿಗಳು ಒಂದರ ಹಿಂದೆ ಒಂದು ಅಡ್ಡ ಬಂದಿದ್ದು, ಡ್ರೈವರ್ ಏನೂ ಮಾಡಲು ಸಾಧ್ಯವಾಗಲಿಲ್ಲ. ಪ್ರಾಣಿಗಳ ಜೀವ ರಕ್ಷಣೆ ಮಾಡಲು ತರಾತುರಿ ಲೆಫ್ಟ್ ಕಡೆಗೆ ಕಾರನ್ನು ತೆಗೆದುಕೊಂಡಿದ್ದಾನೆ. ಆಗ ರಸ್ತೆ ಬದಿ ಇರೋ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ ಎಂದು ಸ್ಪಷ್ಟಪಡಿಸಿದರು.
ಮನೆಯಲ್ಲಿ ದುರ್ಘಟನೆ ನಡೆಯುತ್ತೆ ಎಂದು ಭವಿಷ್ಯ ಹೇಳಿದ್ದರು!!
ಸಿಎಲ್‌ಪಿ ಸಭೆ ಮುಗಿದ ಬಳಿಕ ನಮಗೆ ಯಾವುದೇ ಬೆಂಗಾವಲು ವಾಹನ ಇರಲಿಲ್ಲ. ನಾವು ಯಾರಿಗೂ ಇಂಟಿಮೇಶನ್ ಕೊಟ್ಟಿರಲಿಲ್ಲ. ಸಂಕ್ರಮಣದ ಸಮಯದಲ್ಲಿ ಇಂತಹ ಘಟನೆಗಳು ಆಗುತ್ತವೆ ಎಂದು ಹಿರಿಯರು ಹೇಳಿದ್ದರು. ನಮಗೆ ಬೇಕಾದವರು ಸಂಕ್ರಮಣದ ಸಂದರ್ಭದಲ್ಲಿ ಮನೆಯಲ್ಲಿ ದುರ್ಘಟನೆ ನಡೆಯುತ್ತದೆ ಎಂದು ಭವಿಷ್ಯ ಹೇಳಿದ್ದರು. ಆದರೂ ಕೂಡಾ ನಮ್ಮಿಂದಲೇ ಅಚಾತುರ್ಯ ಜರುಗಿದೆ ಎಂದು ಹೇಳಿದರು.