ಉಜಿರೆ :(ಜ.17) ಉಜಿರೆಯ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಬೆನಕ ಹೆಲ್ತ್ ಸೆಂಟರ್ 25ನೇ ವರ್ಷದ ಹೊಸ್ತಿಲಿನಲ್ಲಿದೆ. ಈ ಹಿನ್ನೆಲೆ ಜ.18ರಂದು ಉಜಿರೆಯ ಬೆನಕ ಹೆಲ್ತ್ ಸೆಂಟರ್ ನಲ್ಲಿ ರಜತ ಸಂಭ್ರಮ ಮತ್ತು ನೂತನ ವಿಸ್ತರಣಾ ಕಟ್ಟಡದ ಉದ್ಘಾಟನೆ ನಡೆಯಲಿದೆ ಎಂದು ಬೆನಕ ಆಸ್ಪತ್ರೆಯ ಮುಖ್ಯಸ್ಥ ಡಾ. ಗೋಪಾಲಕೃಷ್ಣ ಅವರು ತಿಳಿಸಿದರು.
ಆಸ್ಪತೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಗೋಪಾಲ ಕೃಷ್ಣ ಅವರು , ರಜತ ಸಂಭ್ರಮದ ಕಾರ್ಯಕ್ರಮವನ್ನು ವಿಧಾನ ಸಭೆ ಸ್ಪೀಕರ್ ಯು. ಟಿ ಖಾದರ್ ಉದ್ಘಾಟನೆಗೊಳಿಸಲಿದ್ದಾರೆ. ನೂತನ ವಿಸ್ತರಣಾ ಕಟ್ಟಡದ ಉದ್ಘಾಟನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ನಡೆಸಲಿದ್ದಾರೆ ಎಂದು ತಿಳಿಸಿದರು.
ನೂತನ ಕಟ್ಟಡದ ಕ್ಯಾಶುವಲ್ಟಿ ವಿಭಾಗವನ್ನು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ಡೇ ಕೇರ್ ವಿಭಾಗವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ನೂತನ ಮಕ್ಕಳ ವಿಭಾಗವನ್ನು ಕರ್ನಾಟಕ ಸರ್ಕಾರದ ಆರೋಗ್ಯ ರಕ್ಷಣಾ ಮಂಡಳಿಯ ಸದಸ್ಯ ಡಾ. ಯು.ಟಿ ಇಫ್ತೀಕರ್ ಅಲಿ ಉದ್ಘಾಟಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ.ಭಾರತಿ ಜಿ.ಕೆ, ಡಾ. ಆದಿತ್ಯ ರಾವ್, ಡಾ. ಅಂಕಿತಾ ಜಿ ಭಟ್, ಡಾ. ರೋಹಿತ್ ಜಿ. ಭಟ್ ಉಪಸ್ಥಿತರಿದ್ದರು.
ನೂತನ ವಿಸ್ತರಿಸಿದ ಕಟ್ಟಡದಲ್ಲಿ ಏನೆಲ್ಲ ಇರಲಿದೆ..?
ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವಿಸ್ತರಣಾ ಕಟ್ಟಡವನ್ನು ಅಂದವಾಗಿ ನಿರ್ಮಿಸಿದ್ದು, ರೆಸೆಪ್ಷನ್, ಎಮೆರ್ಜೆನ್ಸಿ, ಎಮರ್ಜೆನ್ಸಿಯಲ್ಲಿ ರಕ್ತ ಪರೀಕ್ಷೆ ಸೇರಿ ಹಲವು ಪರೀಕ್ಷೆಗಳು, ಡೇ ಕೇರ್ ವಿಂಗ್, ಮಕ್ಕಳಾ ವಿಭಾಗ, ಸಿಟಿ ಸ್ಕ್ಯಾನಿಂಗ್ ವಿಭಾಗ, ರೋಗಿಗಳ ಆರೈಕೆಗೆ ವಿಶೇಷ ಕೊಠಡಿಗಳು ಇರಲಿದೆ, ಅತ್ಯಾಧುನಿಕ ಯಂತ್ರೋಪಕರಣ ವ್ಯವಸ್ಥೆ ಕೂಡ ಇರಲಿದೆ. ಇನ್ನು ಮುಂದೆ ಬೆನಕ ಆಸ್ಪತ್ರೆಯಲ್ಲಿ 130 ಹಾಸಿಗೆಯ ಮೂಲಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಗರಿಮೆ ಇರಲಿದೆ.
ಹಳೆ ದಿನಗಳನ್ನು ನೆನೆದ ಡಾ.ಗೋಪಾಲಕೃಷ್ಣ…!
2000ನೇ ಇಸವಿಯಲ್ಲಿ 2 ವೈದ್ಯರು 7 ಹಾಸಿಗೆಯಿಂದ ಆರಂಭವಾದ ಸಣ್ಣ ಆಸ್ಪತ್ರೆ ಇಂದು ಬೃಹದಾಕಾರವಾಗಿದೆ ಎಂದು ಡಾ. ಗೋಪಾಲಕೃಷ್ಣ ಹೇಳಿದರು. 1990ರಲ್ಲಿ ನಾನು ನನ್ನ ಕ್ಲಿನಿಕ್ ಆರಂಭ ಮಾಡಿದೆ. ವಾಂತಿ , ಭೇದಿ ಹಿನ್ನೆಲೆ ನಮ್ಮಲ್ಲಿ ಬರುತ್ತಾ ಇದ್ದರು. ಆಗ ಕ್ಲಿನಿಕ್ ಇದ್ದಿದ್ದರಿಂದ ಅವರಿಗೆ ಸರಿಯಾದ ಚಿಕಿತ್ಸೆ ಕೊಡಲು ಆಗುತ್ತಿರಲಿಲ್ಲ. ಹೀಗಾಗಿ ಆಸ್ಪತ್ರೆ ಆರಂಭಿಸಿದೆವು. ನನ್ನ ಪತ್ನಿ ಕೂಡ ವೈದ್ಯಳಾಗಿದ್ದರಿಂದ, ಹೆರಿಗೆ ಕೂಡ ಮಾಡಿಸುತ್ತಿದ್ದೆವು. ಹೀಗೆ ಹಂತ ಹಂತವಾಗಿ ಗ್ರಾಮೀಣ ಪ್ರದೇಶವಾದ ಬೆಳ್ತಂಗಡಿಯಲ್ಲಿ ಉತ್ತಮ ಸೇವೆ ನೀಡುವ ಉದ್ದೇಶದಿಂದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದೆವು ಎಂದರು. ಎಲ್ಲರೂ ಗುಣಮುಖರಾಗಬೇಕು ಎನ್ನುವುದೇ ನಮ್ಮ ಆಸ್ಪತ್ರೆಯ ಉದ್ದೇಶ ಎಂದರು. ರೋಗಿಗಳು ಎಲ್ಲಾ ಸೇವೆಗೆ ಮಂಗಳೂರಿಗೆ ಹೋಗಬೇಕು ಅದು ಅವರಿಗೆ ಸಮಸ್ಯೆ ಹೀಗಾಗಿ ಇಲ್ಲೇ ಸೇವೆ ನೀಡುವ ಉದ್ದೇಶದಿಂದ ಒಂದೊಂದೆ ಸೇವೆಯನ್ನು ಆರಂಭಿಸಿದೆವು. ಸದ್ಯ ನಮ್ಮ ಆಸ್ಪತ್ರೆಯಲ್ಲಿ 40 ವೈದ್ಯರು ಸೇರಿ ವಿವಿಧ ವೈದ್ಯಕೀಯ ಸೇವೆಗಳ ಮೂಲಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿ ಹೊರಹೊಮ್ಮಿದೆ ಎಂದರು.