Sun. Jan 19th, 2025

Shivamogga: ಅದರಷ್ಟಕ್ಕೆ ಮಲಗಿದ್ದ ನಾಯಿಯನ್ನು ಕೊಂದು ಆಟೋಗೆ ಕಟ್ಟಿ ಎಳೆದೊಯ್ದ ವ್ಯಕ್ತಿ!!

ಶಿವಮೊಗ್ಗ (ಜ.19): ಓರ್ವ ವ್ಯಕ್ತಿ ಬೀದಿ ನಾಯಿಯನ್ನು ಅಮಾನುಷವಾಗಿ ಹೊಡೆದು ಕೊಂದು ಆಟೋದಲ್ಲಿ ಎಳೆದುಕೊಂಡು ಹೋಗಿರುವಂತಹ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮದ ರೈಲ್ವೇ ನಿಲ್ದಾಣದ ಬಳಿಯಲ್ಲಿ ನಡೆದಿದೆ. ನಾಯಿ ಕೊಂದಾತನನ್ನು ಆಟೋ ಚಾಲಕ ವಾಜೀದ್ ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಳಾಲು: ಮಲೆಚಾಮುಂಡಿ ಮತ್ತು ಗುಳಿಗ ದೈವಗಳ ನೂತನವಾಗಿ ನಿರ್ಮಿಸಿದ ದೈವದ ಕಟ್ಟೆಗಳ ಪ್ರತಿಷ್ಠೆ

ನಡೆದಿದ್ದೇನು?
ಕೆಂಚನಾಲ ರೈಲ್ವೆ ನಿಲ್ದಾಣದ ಬಳಿಯಲ್ಲಿ ಅದರಷ್ಟಕ್ಕೆ ಮಲಗಿದ್ದ ನಾಯಿಯ ಮೇಲೆ ಆರೋಪಿ ವಾಜೀದ್ ದೊಡ್ಡ ಗಾತ್ರದ ಕಲ್ಲನ್ನು ಎತ್ತಿ ಹಾಕುತ್ತಾನೆ. ಆಗ ನಾಯಿ ಕಿರುಚುತ್ತಾ ಅಲ್ಲೇ ಕುಸಿದು ಬೀಳುತ್ತದೆ. ಅಷ್ಟಕ್ಕೇ ಸುಮ್ಮನಾಗದ ಆರೋಪಿ ಮತ್ತೊಮ್ಮೆ ಅದೇ ಕಲ್ಲನ್ನು ಎತ್ತಿ ತಲೆ ಮೇಲೆ ಹಾಕಿದ್ದಾನೆ. ಇದರಿಂದ ಅರ್ಧ ಜೀವವಾದ ನಾಯಿ ಅಲ್ಲೇ ನರಳಾಡುತ್ತಿರುತ್ತದೆ. ಅಲ್ಲಿಂದ ಸ್ವಲ್ಪ ದೂರಕ್ಕೆ ಹೋದ ಆರೋಪಿ ಮತ್ತೊಮ್ಮೆ ಹಿಂದಿರುಗಿ ಬಂದು ಇನ್ನಷ್ಟೂ ಕ್ರೂರವಾಗಿ ಅದೇ ಕಲ್ಲನ್ನು ಮತ್ತೆ ನಾಯಿಯ ತಲೆ ಮೇಲೆ ಹಾಕಿದ ರಭಸಕ್ಕೆ ನಾಯಿ ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ.

ಕೊನೆಗೆ ಆ ನಾಯಿಯನ್ನು ತನ್ನ ಆಟೋ ಹಿಂಬದಿಗೆ ಕಟ್ಟಿ ರಸ್ತೆಯ ಮೇಲೆ ಅತೀ ಅಮಾನುಷವಾಗಿ ಎಳೆದೊಯ್ದಿದ್ದಾನೆ. ಈ ಘಟನೆ ನಡೆಯುವಾಗ ಅಲ್ಲಿದ್ದ ಸ್ಥಳೀಯ ಯುವಕನೊಬ್ಬ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಇನ್ನು ಮಾಹಿತಿ ನೀಡಿದ ಕೇವಲ 45 ನಿಮಿಷಗಳಲ್ಲಿ ಮಾಜಿ ಸಚಿವೆ ಮೇನಕಾ ಗಾಂಧಿ ಈ ಮೇಲ್​ ಮೂಲಕ ಸ್ಪಂದಿಸಿದ್ದಾರೆ. ಮಾಹಿತಿ ನೀಡದ ಯುವಕನಿಗೆ ಕೂಡಲೇ ಸ್ಥಳೀಯ ಠಾಣೆಗೆ ತೆರಳಿ ದೂರು ನೀಡುವಂತೆ ತಿಳಿಸಿದ್ದಾರೆ.

ಮೇನಕಾ ಗಾಂಧಿರವರ ಕರೆ ಬರುತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಪ್ರಾಣಿ ದಯಾ ಸಂಘದವರು ಈ ಬಗ್ಗೆ ಪಶು ವೈದ್ಯಾಧಿಕಾರಿ ಕಡೆಯಿಂದ ಪಟ್ಟಣದ ಠಾಣೆಗೆ ದೂರು ನೀಡಲಾಗಿದೆ. ದೂರು ಸಲ್ಲಿಕೆಯಾಗಿ 15 ನಿಮಿಷಗಳಲ್ಲಿ ಆರೋಪಿ ಆಟೋ ಚಾಲಕ ವಾಜೀದ್ ನನ್ನು ಪಿಎಸ್‌ಐ ಪ್ರವೀಣ್, ಎಸ್​ಪಿ ನೇತ್ರತ್ವದಲ್ಲಿ ಬಂಧಿಸಿ ಆರೋಪಿಯ ವಿರುದ್ದ ಭಾರತೀಯ ನ್ಯಾಯ ಸಂಹಿತಾ (BNS), 2023ರ ಸೆಕ್ಷನ್ 325 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (PCA) ಕಾಯಿದೆ ಅಡಿಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *