ಬೆಳ್ತಂಗಡಿ:(ಜ.25) ಸೌತಡ್ಕ ದೇವಸ್ಥಾನದ ಹರಕೆ ಗಂಟೆ ಹಗರಣ ಮತ್ತು ಹುಂಡಿ ಹಣದ ಅವ್ಯವಹಾರ ಕುರಿತು ಮರುತನಿಖೆಗೆ ಒತ್ತಾಯಿಸಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವರಿಗೆ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಶಾಂತ್ ಪೂವಾಜೆ ಮನವಿ ಮಾಡಿದ್ದಾರೆ.
ಇತ್ತೀಚೆಗೆ ರಚನೆಗೊಂಡಿರುವ “ಸೌತಡ್ಕ ಸಂರಕ್ಷಣಾ ವೇದಿಕೆ” ಎಂಬ ಹೆಸರಿನಲ್ಲಿ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಇತರ 4 ಮಂದಿ ಸದಸ್ಯರು ನೂತನ ವ್ಯವಸ್ಥಾಪನಾ ಸಮಿತಿಗೆ ಚುನಾವಣೆಗಾಗಿ ಅರ್ಜಿ ಸಲ್ಲಿಸಿರುವ ಬಗ್ಗೆ ಪತ್ರಿಕಾ ವರದಿಯ ಮಾಹಿತಿ ಪಡೆದುಕೊಂಡಿದ್ದು, ಅವರನ್ನು ಸೌತಡ್ಕ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ಮರು ಆಯ್ಕೆ ಮಾಡಬಾರದು ಎಂದು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಅಧ್ಯಕ್ಷ ಮತ್ತು ದತ್ತಿ ಇಲಾಖೆ ಸಚಿವರು, ಆಯುಕ್ತರು ಹಾಗೂ 8 ಮಂದಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಿಗೆ ಲಿಖಿತ ದೂರು ನೀಡಿದ್ದೇವೆ ಎಂದು ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಪ್ರಶಾಂತ್ ಪೂವಾಜೆ ತಿಳಿಸಿದ್ದಾರೆ.
ಸೌತಡ್ಕ ದೇವಾಲಯದಲ್ಲಿ ಕಾನೂನು ಬಾಹಿರವಾಗಿ ಮತ್ತು ದತ್ತಿ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿ, ಭಕ್ತರು ದೇವರಿಗೆ ಸಮರ್ಪಿಸಿರುವ ಹರಕೆ ಗಂಟೆಗಳ ಹರಾಜಿನಲ್ಲಾದ ಅವ್ಯವಹಾರ ಬಗ್ಗೆ ವಿವರಣೆ ನೀಡಲಾಗಿದೆ. ಅದೇ ರೀತಿ, 19 ವರ್ಷ ದೇವಳದ ಸಮಿತಿ ಸದಸ್ಯರಾಗಿದ್ದುಕೊಂಡು, ಪ್ರತಿ ಹುಂಡಿ ಎಣಿಕೆ ಮಾಡುವ ವೇಳೆ ಸ್ವಲ್ಪ ಸ್ವಲ್ಪ ಹಣ ತೆಗೆದಿರಿಸಿ, ತಮ್ಮ ಆಸ್ತಿ ಖರೀದಿಯ ಸಾಲ ಮರು ಪಾವತಿ ಮಾಡಿರುವ ವಿಶ್ವನಾಥ ಪೂಜಾರಿ ಅವರ ಅವ್ಯವಹಾರದ ಬಗ್ಗೆ ಮರು ತನಿಖೆ ನಡೆಸುವಂತೆಯೂ ಕೋರಲಾಗಿದೆ ಎಂದು ತಿಳಿಸಿದ್ದಾರೆ.
2017 ರಿಂದ 2020 ನೇ ಸಾಲಿನ ವ್ಯವಸ್ಥಾಪನಾ ಸಮಿತಿ, ಸೌತಡ್ಕ ದೇಗುಲದ ಗಣೇಶ ಕಲಾ ಮಂದಿರದ ಬಲ ಭಾಗದಲ್ಲಿದ್ದ ಹಣ್ಣು ಕಾಯಿಯೊಂದಿಗೆ ಗಂಟೆ ಅಂಗಡಿ, ಅವಲಕ್ಕಿ ಪಂಚಕಜ್ಜಾಯ ತಯಾರಿ ಟೆಂಡರ್ ವ್ಯವಸ್ಥೆಯಲ್ಲಿ ಮತ್ತು ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ- ನಿರ್ವಹಣೆಯಲ್ಲಿ ಅವ್ಯವಹಾರ ನಡೆಸಲಾಗಿದ್ದು, ಇದು ದೇಗುಲದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವ ಬಗ್ಗೆ ದಾಖಲೆಗಳು ಸ್ಪಷ್ಟವಾಗಿ ತಿಳಿಸುತ್ತವೆ ಎಂದು ಪೂವಾಜೆ ಮಾಹಿತಿ ಹಂಚಿಕೊಂಡಿದ್ದಾರೆ.
ದೇವರಿಗೆ ಕಂಚಿನ ಗಂಟೆಗಳಿಂದ ಪಂಚಲೋಹದ ಪ್ರಭಾವಳಿಗೆ ತಯಾರಿ ಮಜೂರಿ ಸೇರಿ ಸುಮಾರು 170 ಕೆ. ಜಿ. ತೂಕದ ಪ್ರಭಾವಳಿಗೆ 3650 ಕೆ. ಜಿ. ಗಂಟೆಗಳನ್ನು ನೀಡಿದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದು, ಗಂಟೆ ಹಗರಣದ ವ್ಯತ್ಯಾಸ ಸರಿದೂಗಿಸಲು, ಸಮಿತಿಯ ಎಲ್ಲಾ ಸದಸ್ಯರು ನೀಡಿರುವ ತನಿಖಾ ಹೇಳಿಕೆ ಇದಕ್ಕೆ ಪುಷ್ಟಿ ನೀಡುತ್ತದೆ ಎಂದು ಪ್ರಶಾಂತ್ ಪೂವಾಜೆ ತಿಳಿಸಿದ್ದಾರೆ.