ಮಂಗಳೂರು (ಜ.26): ಮುಡಿಪುವಿನಲ್ಲಿರುವ ಸಂತ ಜೋಸೆಫ್ ವಾಝ್ ಚರ್ಚ್ ಗೆ ಕಳ್ಳನೋರ್ವ ನುಗ್ಗಿ ಪರಮಪ್ರಸಾದ ಇಡುವ ಪೆಟ್ಟಿಗೆಯನ್ನು ಒಡೆದು ಪರಮಪ್ರಸಾದ ಹಂಚುವ ವಸ್ತುಗಳನ್ನು ಹಾಗೂ ಕಾಣಿಕೆಗೆ ಹಾಕಿರುವ ಹಣವನ್ನು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಜನವರಿ 24ರಂದು ರಾತ್ರಿ ಕಳ್ಳ ಚರ್ಚ್ ನ ಬಾಗಿಲು ಮುರಿದು ಒಳನುಗ್ಗಿದ್ದಾನೆ. ಕಳ್ಳ ತಲೆಗೆ ಬಟ್ಟೆ ಕಟ್ಟಿ ಮುಖಕ್ಕೆ ಮಾಸ್ಕ್ ಧರಿಸಿದ್ದ. ಕಳ್ಳತನ ನಡೆಸಿರುವ ಘಟನೆ ಬೆಳಕಿಗೆ ಬಂದ ಕೂಡಲೇ ಚರ್ಚ್ ನ ಪದಾಧಿಕಾರಿಗಳು ಪೊಲೀಸರ ಗಮನಕ್ಕೆ ತಂದಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ ಹಾಗೂ ಸಿಸಿಟಿವಿಯ ಆಧಾರದಲ್ಲಿ ಕಳ್ಳನ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.