ಮಂಗಳೂರು (ಜ.26): ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕಟೀಲು ಮೇಳದ ಯಕ್ಷಗಾನ ಕಲಾವಿದರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಆನಂದ ಕಟೀಲು (50ವ) ಮೃತಪಟ್ಟ ವ್ಯಕ್ತಿ.
ಜನವರಿ 1 ರಂದು ಕಿನ್ನಿಗೋಳಿ ಬಳಿಯ ಮೆನ್ನಬೆಟ್ಟುವಿನಲ್ಲಿ ಆಟೋದಲ್ಲಿ ತೆರಳುತ್ತಿದ್ದ ವೇಳೆ ಆಟೋ ಪಲ್ಟಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು, ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಹಣ ಹೊಂದಿಸಲಾಗದೇ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ರಿಕ್ಷಾ ಅಪಘಾತದಲ್ಲಿ ಬೆನ್ನು ಮೂಳೆಗೆ ಬಲವಾಗಿ ಗಾಯವಾಗಿ ಅದು ಮುರಿದಿತ್ತು. ನಂತರ ಹಂತ ಹಂತವಾಗಿ ಆರೋಗ್ಯ ಹದಗೆಟ್ಟು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇಪ್ಪತ್ತು ವರ್ಷದಿಂದ ಸ್ತ್ರೀವೇಷಧಾರಿಯಾಗಿ ರಾಣಿಯರ ಸಖಿ ಸೇರಿದಂತೆ ಪೋಷಕ ಪಾತ್ರ ನಿರ್ವಹಿಸುತ್ತಿದ್ದರು. ಪ್ರಸ್ತುತ ತಿರುಗಾಟದಲ್ಲಿ 5ನೇ ಮೇಳದ ಕಲಾವಿದರಾಗಿದ್ದರು. ಕಟೀಲು ಬಳಿಯ ಮನೆಯಲ್ಲಿ ಪತ್ನಿಯೊಂದಿಗೆ ಜೀವನ ನಡೆಸುತ್ತಿದ್ದರು.