ಉಜಿರೆ :(ಫೆ.11) ಕೈ-ಕಾಲುಗಳಲ್ಲಿ ಕೆಸರು, ತಲೆ ಮೇಲೆ ಮುಟ್ಟಾಳೆ, ಸಾಂಸ್ಕೃತಿಕ ಉಡುಗೆ ತೊಡುಗೆ. ಈ ಸುಂದರ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಬೆಳಾಲಿನ ಅನಂತೋಡಿಯಲ್ಲಿರುವ ಗದ್ದೆ. ಹೌದು, ವಿಭಿನ್ನ ಸಾಮಾಜಿಕ ಕಾರ್ಯಗಳ ಮೂಲಕ ಜನ ಮಾನಸ ತಲುಪಿರುವ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ “ಯುವ ಸಿರಿ ರೈತ ಭಾರತದ ಐಸಿರಿ” ಅನ್ನುವ ಕಾರ್ಯಕ್ರಮವನ್ನು ಯುವ ಜನರಿಗಾಗಿ ಆಯೋಜಿಸಿತ್ತು.

ಇದನ್ನೂ ಓದಿ: ಬೆಳ್ತಂಗಡಿ: ಧರ್ಮಸ್ಥಳದಿಂದ ಚಾರ್ಮಾಡಿಯವರೆಗೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಕಾರು
ಯುವಕರಿಗೆ ಕೃಷಿ ಬಗ್ಗೆ ಮಾಹಿತಿ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾವಿರಕ್ಕೂ ಅಧಿಕ ಯುವಕ ಯುವತಿಯರು ಗದ್ದೆಗೆ ಇಳಿದು ಭತ್ತ ಕಟಾವು ಮಾಡಿದರು. ಬಿಸಿಲನ್ನು ಲೆಕ್ಕಿಸದೆ ಯುವ ರೈತರು ಖುಷಿಯಿಂದಲೇ ಫಸಲನ್ನು ಕಟಾವು ಮಾಡಿದರು. ಬಳಿಕ ಕಟಾವು ಮಾಡಿದ ಫಸಲನ್ನು ಹೊತ್ತು ತಂದು ಅನಂತೋಡಿಯ ಅನಂತ ಪದ್ಮನಾಭ ದೇವಸ್ಥಾನದ ಮುಂಭಾಗ ಪೈರು ಮತ್ತು ಭತ್ತವನ್ನು ಬೇರ್ಪಡಿಸುವ ಕೆಲಸ ಮಾಡಿದರು. ಈ ಮೂಲಕ ಅನ್ನದ ಮಹತ್ವವನ್ನು ವಿದ್ಯಾರ್ಥಿಗಳು ತಿಳಿದರು.



ಬದುಕು ಕಟ್ಟೋಣ ಬನ್ನಿ ತಂಡಕ್ಕೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ :
ಏಕಕಾಲದಲ್ಲಿ 4.30 ಎಕರೆ ಗದ್ದೆಯಲ್ಲಿ 735 ಮಂದಿಯಿಂದ ನಡೆದ ನೇಜಿ ನಾಟಿ ಕಾರ್ಯಕ್ರಮಕ್ಕೆ ಬದುಕು ಕಟ್ಟೋಣ ಬನ್ನಿ ತಂಡ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದೆ. ಈ ಪ್ರಶಸ್ತಿಯನ್ನು ಇದೇ ವೇದಿಕೆಯಲ್ಲಿ ಸಂಚಾಲಕ ಮೋಹನ್ ಕುಮಾರ್ ಅವರಿಗೆ ಹಸ್ತಾಂತರ ಮಾಡಲಾಯಿತು.

ಧರ್ಮಾಧಿಕಾರಿ ಡಾ.ಹೆಗ್ಗಡೆಯವರ ಪ್ರೇರಣೆಯಿಂದ ನಮ್ಮ ತಂಡ ಸಮಾಜಮುಖಿ ಕೆಲಸ ನಿರ್ವಹಿಸುತ್ತಿದೆ: ಮೋಹನ್ ಕುಮಾರ್
ಶ್ರೀ ಕೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಅವರ ಪ್ರೇರಣೆಯಿಂದ ನಮ್ಮ ಬದುಕು ಕಟ್ಟೋಣ ಬನ್ನಿ ತಂಡ ಸಮಾಜಮುಖಿ ಕೆಲಸ ಮಾಡುತ್ತಿದೆ. ಪ್ರಶಸ್ತಿ , ಸನ್ಮಾನಗಳು, ಕಾರ್ಯಕರ್ತರಿಗೆ ಸಂದ ಗೌರವವಾಗಿದೆ ಎಂದು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಅವರು ಹೇಳಿದರು.
