Mon. Feb 24th, 2025

Belthangady: ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಯನ್ನು ರಸ್ತೆ ಮಧ್ಯೆ ಅಡ್ಡಗಟ್ಟಿ ಲೈಂಗಿಕ ಕಿರುಕುಳ – ಫೋಕ್ಸೋ ಕೇಸಿನಲ್ಲಿ ಆರೋಪಿಗೆ 1 ವರ್ಷ ಜೈಲು

ಬೆಳ್ತಂಗಡಿ:(ಫೆ.12) ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಯನ್ನು ರಸ್ತೆ ಮಧ್ಯೆ ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ವಿಚಾರಣೆಯನ್ನು ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಅಪರಾಧಿಗೆ ಒಂದು ವರ್ಷ ಸಾದಾ ಜೈಲು ಶಿಕ್ಷೆ ಮತ್ತು 10 ಸಾವಿರ ರೂ.ದಂಡವನ್ನು ವಿಧಿಸಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸಂತ್ರಸ್ತೆಗೆ ಒಂದು ಲಕ್ಷ ರೂ. ಪರಿಹಾರ ನೀಡಲು ಆದೇಶ ನೀಡಿದೆ.

ಇದನ್ನೂ ಓದಿ: ⭕ಬೆಳ್ತಂಗಡಿ: ಗೋವಿಂದೂರು ಶಾಲಾ ಬಳಿಯ ಗುಡ್ಡಕ್ಕೆ ಬೆಂಕಿ!!

ಜಮಾಲ್‌ (24) ಶಿಕ್ಷೆಗೊಳಗಾದ ಅಪರಾಧಿ. ಈತ ಬೆಳ್ತಂಗಡಿಯಲ್ಲಿ ಮೆಕ್ಯಾನಿಕ್‌ ಕೆಲಸ ಮಾಡುತ್ತಿದ್ದ. ಲೈಂಗಿಕ ದೌರ್ಜನ್ಯ ನಡೆದ ಮೂರು ತಿಂಗಳಲ್ಲೇ ತೀರ್ಪು ಪ್ರಕಟಗೊಂಡಿದೆ.

ಅ.5,2024 ರಂದು ವಿದ್ಯಾರ್ಥಿನಿ ತನ್ನ ಸಂಬಂಧಿ ಜೊತೆ ಬೆಳ್ತಂಗಡಿಯ ಐಟಿಐಯೊಂದಕ್ಕೆ ಕುಕ್ಕೇಡಿ ಗೋಳಿಯಂಗಡಿಯ ನಿರ್ಜನ ಪ್ರದೇಶದ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಜಮಾಲ್‌ ಬೈಕ್‌ನಲ್ಲಿ ಬಂದು ವಿದ್ಯಾರ್ಥಿನಿಯನ್ನು ಅಡ್ಡ ಗಟ್ಟಿದ್ದು, ನಂತರ ಲೈಂಗಿಕ ಕಿರುಕುಳ ನೀಡಿದ್ದಾನೆ.

ಅ.10 ರಂದು ಬೈಕ್‌ನಲ್ಲಿ ಹಿಂಬಾಲಿಸಿದ ಈತ ವಿದ್ಯಾರ್ಥಿನಿ ಮತ್ತು ಈಕೆಯ ಜೊತೆ ಇದ್ದ ಸ್ನೇಹಿತೆಗೆ ಬೈಕ್‌ ತಾಗಿಸಿಕೊಂಡು ಹೋಗಿದ್ದ. ಅ.15 ರಂದು ಬೆಳಗ್ಗೆ ಕುಕ್ಕೇಡಿ ಪುಲ್ಲಿಯ ಪ್ರದೇಶದಲ್ಲಿ ವಿದ್ಯಾರ್ಥಿನಿ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದು ಲೈಂಗಿಕ ಕಿರುಕುಳ ನೀಡಿದ್ದ. ಈ ಕುರಿತು ವೇಣೂರು ಪೊಲೀಸ್‌ ಠಾಣೆಯಲ್ಲಿ ಸೆಕ್ಷನ್‌ 12ರಡಿ ಫೋಕ್ಸೋ ಮತ್ತು ಬಿಎನ್‌ಎಸ್‌ 78ರ ಅಡಿಯಲ್ಲಿ ಕೇಸು ದಾಖಲು ಮಾಡಲಾಗಿತ್ತು.

ವಿಶೇಷ ಸರಕಾರಿ ಅಭಿಯೋಜಕ ಸಹನಾದೇವಿ ಬೋಳೂರು ವಕಾಲತ್ತು ವಹಿಸಿದ್ದರು.

Leave a Reply

Your email address will not be published. Required fields are marked *