ವಿಜಯಪುರ, (ಫೆ.12): ಕೆಲ ದಿನಗಳಿಂದ ತಣ್ಣಗಿದ್ದ ಭೀಮಾತೀರದಲ್ಲಿ ಈಗ ರಕ್ತದೋಕುಳಿ ಹರಿದಿದೆ. ಭೀಮಾತೀರದ ಹಂತಕ ಬಾಗಪ್ಪ ಹರಿಜನನನ್ನು ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿದ್ದಾರೆ. ಫೆಬ್ರವರಿ 11 ರ ರಾತ್ರಿ ವಿಜಯಪುರದ ಮದಿನಾ ನಗರದಲ್ಲಿ ಮಾರಕಾಸ್ತ್ರಗಳಿಂದ ಮುಖ, ತಲೆ ಸೇರಿದಂತೆ ಸಿಕ್ಕ ಸಿಕ್ಕಲ್ಲಿ ಹೊಡೆದು ಬಾಗಪ್ಪನನ್ನು ಕೊಲೆ ಮಾಡಲಾಗಿದೆ. ಈ ಹಿಂದೆ ಕೋರ್ಟ್ ಆವರಣದಲ್ಲಿಯೇ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿಯಾಗಿತ್ತು. ಆದರೆ ಆಗ ಬಾಗಪ್ಪ ಬಚಾವ್ ಆಗಿದ್ದ. ಆದರೆ ಈ ಸಲ ಹಂತಕರು ಬಾಗಪ್ಪನನ್ನು ಬಿಡಲಿಲ್ಲ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ: ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಯನ್ನು ರಸ್ತೆ ಮಧ್ಯೆ ಅಡ್ಡಗಟ್ಟಿ ಲೈಂಗಿಕ ಕಿರುಕುಳ
ಬಾಗಪ್ಪ ಹರಿಜನ ಭೀಕರ ಕೊಲೆಯಾಗಿದ್ದು, ಘಟನಾ ಸ್ಥಳಕ್ಕೆ ವಿಜಯಪುರ ಎಸ್.ಪಿ. ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಬಾಗಪ್ಪ ಹರಿಜನ ಹಂತಕರ ಪತ್ತೆಗಾಗಿ ASP ರಾಮನಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಇನ್ನು ಈ ಬಾಗಪ್ಪ ಹರಿಜನ ಅನೇಕ ಪ್ರಕರಣದಲ್ಲಿ ಕೊಲೆ ಆರೋಪಿ ಆಗಿದ್ದ. ಬಳಿಕ ಜಾಮೀನಿನ ಮೇಲೆ ಆಚೆ ಬರುತ್ತಿದ್ದ. ಕ್ರೈಂ ಚಟುವಟಿಕೆಗಳಿಂದ ಆಚೆ ಬಂದು ಜೀವನ ಮಾಡಬೇಕೆಂದು ಬಾಗಪ್ಪ ಹೇಳಿಕೊಂಡಿದ್ದ.



ನಾನೂ ಕೂಡಾ ಸಾಮಾನ್ಯರಂತೆ ಬದುಕಬೇಕು ಎಂದುಕೊಂಡಿದ್ದೇನೆ. ಆದರೆ ತನಗೆ ಚಂದಪ್ಪನ ಸಂಬಂಧಿಗಳು ಬಿಡುತ್ತಿಲ್ಲ ಎಂದು ಭೀಮಾ ತೀರದ ಹಂತಕನಂತಲೇ ಗುರುತಿಸಿಕೊಂಡಿರುವ ಬಾಗಪ್ಪ ಹರಿಜನ ಇತ್ತೀಚೆಗೆ ಹೇಳಿಕೊಂಡಿದ್ದ. ಅಲ್ಲದೇ ಸಾಮಾನ್ಯರಂತೆ ಬದುಕುವ ಆಸೆ ವ್ಯಕ್ತಪಡಿಸಿದ್ದ. ಆದ್ರೆ, ಇದಕ್ಕೆ ದುಷ್ಕರ್ಮಿಗಳು ಅವಕಾಶ ಮಾಡಿಕೊಟ್ಟಿಲ್ಲ.

ಈ ಹಿಂದೆ ಗುಂಡೇಟಿನಿಂದ ಗಾಯಗೊಂಡು ಬದುಕುಳಿದಿದ್ದ ಭೀಮಾ ತೀರದ ಹಂತಕನ ಸಹವರ್ತಿ ಭಾಗಪ್ಪ ಹರಿಜನ, ನಾನು ಸಮಾಜಮುಖಿಯಾಗುತ್ತಿದ್ದೇನೆ. ಆದರೆ ನನ್ನ ಸಹನೆಯನ್ನು ಪರೀಕ್ಷೆ ಮಾಡಬಾರದು. ನನ್ನ ವಿಷಯಕ್ಕೆ ಬಂದಲ್ಲಿ 24 ತಾಸಿನಲ್ಲೇ ಬಂದೂಕು ಹಿಡಿಯುವೆ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದ. ಆದ್ರೆ, ಇದೀಗ ವಿರೋಧಿಗಳೇ ಬಾಗಪ್ಪನನ್ನು ಇಲ್ಲವಾಗಿಸಿದ್ದಾರೆ.
