ಬೆಳ್ತಂಗಡಿ:(ಫೆ.14) ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕತ್ತರಿಗುಡ್ಡೆ ಸಮೀಪದ ಅನ್ನಾರು ಎಂಬಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಾಡಾನೆಯೊಂದು ಗುರುವಾರ ಪತ್ತೆಯಾಗಿತ್ತು.

ಇದನ್ನೂ ಓದಿ: ಉಡುಪಿ : ಪುಣೆಯಿಂದ ನಾಪತ್ತೆಯಾದ ಬಾಲಕ ಉಡುಪಿಯಲ್ಲಿ ಪತ್ತೆ
ಇದೀಗ ಆ ಕಾಡಾನೆ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ಚಾರ್ಮಾಡಿ-ಕನಪಾಡಿ ರಕ್ಷಿತಾರಣ್ಯ ಪ್ರದೇಶದ ಅನ್ನಾರು ಎಂಬಲ್ಲಿ ರಸ್ತೆಯಿಂದ ಸುಮಾರು 30 ಮೀ ದೂರದ ಕಾಡಿನಲ್ಲಿ ಅಂದಾಜು 25 ರಿಂದ 30 ವರ್ಷ ಪ್ರಾಯದ ಹೆಣ್ಣಾನೆ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದುಕೊಂಡಿರುವುದನ್ನು ಸ್ಥಳೀಯರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಅರಣ್ಯ ಇಲಾಖೆ ಅಧಿಕಾರಿ,ಸಿಬ್ಬಂದಿ ವರ್ಗ ತಕ್ಷಣ ಸ್ಥಳಕ್ಕೆ ಧಾವಿಸಿದೆ. ಬಳಿಕ ಮಂಗಳೂರಿನಿಂದ ತಜ್ಞ ಪಶು ವೈದ್ಯರನ್ನು ಕರೆಯಿಸಿ ಕಾಡಾನೆಗೆ ಚಿಕಿತ್ಸೆ ನೀಡುವ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.

ಸಂಪೂರ್ಣವಾಗಿ ಬಳಲಿರುವಂತೆ ಕಂಡುಬಂದಿರುವ ಕಾಡಾನೆ ಆಹಾರ ಸೇವಿಸಲು ಸಾಧ್ಯವಾಗದೆ ಅಥವಾ ಯಾವುದೋ ಅನಾರೋಗ್ಯದಿಂದ ಬಳಲುತ್ತಿರುವಂತೆ ಕಂಡು ಬಂದಿತ್ತು. ರಾತ್ರಿ ಈ ಆನೆ ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.


ಕಾಡಾನೆ ಯಾವ ರೀತಿ ಸಾವನ್ನಪ್ಪಿದೆ ಎಂಬುದು ಪೋಸ್ಟ್ ಮಾರ್ಟಂ ಬಳಿಕವೇ ತಿಳಿದು ಬರಬೇಕಾಗಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲಿದ್ದು ತಜ್ಞ ಪಶು ವೈದ್ಯರು ಆನೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.
