ಬೆಂಗಳೂರು (ಫೆ.19): ಮಹಿಳೆಯೋರ್ವರ ವಾಟ್ಸಾಪ್ ಸಂದೇಶ ಕಂಡು ಬೆಂಗಳೂರಿನ ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ಹೌದು, ಅತ್ತೆಯನ್ನು ಸಾಯಿಸಲು ಮಾತ್ರೆ ಹೇಳಿ ಎಂದು ಸೊಸೆ ವೈದ್ಯರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾಳೆ. ಮಹಿಳೆಯ ಸಂದೇಶ ಕಂಡು ವೈದ್ಯರು ಅಚ್ಚರಿಗೊಂಡಿದ್ದಾರೆ.

ಇದನ್ನೂ ಓದಿ: ಬಂಟ್ವಾಳ: ಉದ್ಯಮಿಯ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಪ್ರಕರಣ
ಬೆಂಗಳೂರು ಮೂಲದ ವೈದ್ಯರಾದ ಡಾ. ಸುನಿಲ್ ಕುಮಾರ್ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಓರ್ವ ಮಹಿಳೆ ಪರಿಚಯವಾಗಿದ್ದಾಳೆ. ಮಹಿಳೆ ಇನ್ಸ್ಟಾಗ್ರಾಮ್ ಮೂಲಕ ಡಾ. ಸುನಿಲ್ ಕುಮಾರ್ರ ದೂರವಾಣಿ ಸಂಖ್ಯೆ ಪಡೆದಿದ್ದಾಳೆ. ನಂತರ, ಫೆಬ್ರವರಿ 17 ರಂದು ಮಹಿಳೆ, ಡಾ. ಸುನಿಲ್ ಕುಮಾರಿಗೆ ವಾಟ್ಸಾಪ್ನಲ್ಲಿ ಸಂದೇಶ ಕಳುಹಿಸಿದ್ದಾಳೆ.

ಮಹಿಳೆ: ವಿಚಾರ ಹೇಳಿದ್ರೆ ಬೈತೀರಾ ಅನಿಸುತ್ತೆ
ವೈದ್ಯ: ಹೇಳಿ
ಮಹಿಳೆ: ಭಯ ಆಗ್ತಾ ಇದೆ ಹೇಳಕ್ಕೆ
ವೈದ್ಯ: ಹೇಳಿ
ಮಹಿಳೆ: ಸಾಯಿಸುವ ವಿಚಾರ, ಹೇಗೆ ಸಾಯಿಸುವುದು ಅಂತ
ವೈದ್ಯ: ಯಾರನ್ನ?
ಮಹಿಳೆ: ಅತ್ತೆನ
ವೈದ್ಯ: ಯಾಕೆ?
ಮಹಿಳೆ: ತುಂಬಾ ಹಿಂಸೆ ಕೊಡ್ತಾ ಇದ್ದಾರೆ, ಅದಕ್ಕೆ ನಿಮ್ಮನ್ನು ಕೇಳೋಣ ಅಂತ. ಏನಾದ್ರೂ ಹೇಳ್ತೀರಾ ಹೇಗೆ ಸಾಯಿಸೋದು ಅಂತ. ಪ್ಲೀಸ್ ಹೇಳಿ. ತುಂಬಾ ಏಜ್ ಆಗಿದೆ.
ವೈದ್ಯ: ನಾವು ಪ್ರಾಣ ಉಳಿಸೋ ಜನ
ಮಹಿಳೆ: ಟ್ಯಾಬ್ಲೆಟ್ ಇರುತ್ತಲ್ಲ ಅದು ಹೇಳಿ. ಒಂದು, ಎರಡು ತಗೊಂಡ್ರೆ ಸಾಯ್ತಾರಲ್ಲ ಆತರ ಇಲ್ವಾ”

ಈ ರೀತಿಯಾಗಿ ಮಹಿಳೆ ಮತ್ತು ವೈದ್ಯರ ನಡುವೆ ಸಂಭಾಷಣೆ ನಡೆದಿದೆ. ಸೊಸೆ ಅತ್ತೆಯನ್ನು ಸಾಯಿಸಲು ವೈದ್ಯರ ಬಳಿ ಮಾತ್ರೆ ಕೇಳಿದ್ದಾರೆ. ಆ ಬಳಿಕ ಮಹಿಳೆ ಕೂಡಲೇ ಸಂದೇಶಗಳನ್ನು ಡಿಲೀಟ್ ಮಾಡಿದ್ದು, ವೈದ್ಯರ ನಂಬರ್ ಬ್ಲಾಕ್ ಮಾಡಿದ್ದಾರೆ. ಮಹಿಳೆಯ ಸಂದೇಶ ಓದಿ ಶಾಕ್ ಆದ ವೈದ್ಯ ಸುನಿಲ್ ಕುಮಾರ್ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ನೀಡಿದ್ದಾರೆ.
ಪ್ರಕರಣ ಸಂಬಂಧ ವೈದ್ಯ ಸುನಿಲ್ ಕುಮಾರ್ ಮಾತನಾಡಿ, “ಸಹನಾ ಎಂಬುವರು ನನಗೆ 17 ರಂದು ಮೆಸೇಜ್ ಮಾಡಿದ್ದರು. ಕನ್ನಡದಲ್ಲಿ ಸಂದೇಶ ಕಳುಹಿಸಿ ಮಾತು ಆರಂಭಿಸಿದರು. ನೀವು ನನಗೆ ಬೈಯುವುದಿಲ್ಲ ಎಂದರೆ ನಿಮ್ಮನ್ನು ಒಂದು ಮಾತು ಕೇಳುತ್ತೇನೆ ಎಂದರು. ಬಳಿಕ ಅತ್ತೆ ತುಂಬ ಕಿರುಕುಳ ನೀಡುತಿದ್ದಾರೆ. ಅವರನ್ನು ಸಾಯಿಸಲು ಎರಡು ಮಾತ್ರೆ ಕೊಡಿ ಎಂದರು. ಅದಾದ ಬಳಿಕ ನಾನು ಪ್ರಶ್ನೆ ಮಾಡಿದೆ. ಬಳಿಕ ಎಲ್ಲ ಸಂದೇಶಗಳನ್ನು ಡಿಲೀಟ್ ಮಾಡಿದರು. ಡಿಲೀಟ್ ಆಗುವ ಮೊದಲೇ ನಾನು ಸ್ಕ್ರೀನ್ಶಾಟ್ ತೆಗೆದುಕೊಂಡಿದ್ದೆ. ಬಳಿಕ ನಾನು ಸಂಜಯನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದೇನೆ” ಎಂದು ಹೇಳಿದರು.


“ಆ ಬಳಿಕ ಮಹಿಳೆ ನನಗೆ (ಸುನಿಲ್ ಕುಮಾರ್) ಕರೆ ಮಾಡಿ ನನ್ನ ಕ್ಷಮಿಸಿಬಿಡಿ ಎಂದು ಕೇಳಿಕೊಂಡರು. ಆದರೆ ನನಗೆ ಅನುಮಾನ ಇದೆ. ಇದು ನಿಜವಾಗಲೂ ಮಹಿಳೆ ಸಂದೇಶ ಮಾಡಿರಬಹುದು. ಅಥವಾ ಯಾರಾದರೂ ನನ್ನ ವಿರುದ್ಧ ಷಡ್ಯಂತರ ಮಾಡಿ ಟ್ರ್ಯಾಪ್ ಮಾಡಿರಬಹುದು. ನಾನು ರಾಜಕೀಯ ಹಾಗೂ ಸಾಮಾಜಿಕವಾಗಿ ಸಕ್ರಿಯನಾಗಿದ್ದೇನೆ. ಸಮಾಜಿಕ ಜಾಲತಾಣದ ಮೂಲಕ ಸಹ ನಾನು ಪ್ರಚಾರವಾಗಿದ್ದೇನೆ. ಈ ಹಿಂದೆ ವಿಜಯಪುರದಲ್ಲಿ ಎಂಎಲ್ಎ ಚುನಾವಣೆಗೆ ಸಹ ಸ್ಪರ್ಧಿಸಿದ್ದೆ. ಯಾರು ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ, ಆದರೆ ಈ ಹಿಂದೆ ವ್ಯಕ್ತಿಯೋರ್ವ ಸಹ ಇದೇ ರೀತಿ ಕರೆ ಮಾಡಿದ್ದನು” ಎಂದು ತಿಳಿಸಿದರು.
