ಉಡುಪಿ:(ಫೆ.21) ರಸ್ತೆ ಅಪಘಾತದಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದು ಮೆದುಳು ನಿಷ್ಕ್ರಿಯಗೊಂಡ ಕಾರಣ ರಾಘವೇಂದ್ರ (35) ಎಂಬ ಯುವಕನ ಕುಟುಂಬಸ್ಥರು ಆತನ ಅಂಗಾಂಗ ದಾನ ಮಾಡುವ ಮಹತ್ವದ ನಿರ್ಧಾರ ಕೈಗೊಂಡು, ಸಾರ್ಥಕತೆ ಮೆರೆದಿದ್ದಾರೆ.

ಇದನ್ನೂ ಓದಿ: ಉಜಿರೆ: ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ
ಚಾಲಕನಾಗಿ ಕೆಲಸ ಮಾಡುತ್ತಿದ್ದ ಕುಂದಾಪುರದ ನಿವಾಸಿ ರಾಘವೇಂದ್ರ (35) ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.



ಚಿಕಿತ್ಸೆಯ ನಂತರ ರಾಘವೇಂದ್ರ ಚೇತರಿಸಿಕೊಳ್ಳಲಿಲ್ಲ. ಹೀಗಾಗಿ, ಮಾನವ ಅಂಗಾಂಗ ಕಸಿ ಕಾಯಿದೆ 1994ರ ಪ್ರಕಾರ ಪರಿಣತ ವೈದ್ಯರ ಸಮಿತಿ ಎರಡು ಬಾರಿ ಅಧಿಕೃತವಾಗಿ ಬ್ರೈನ್ ಡೆಡ್ ಎಂದು ಘೋಷಿಸಿದ್ದಾರೆ.

ರಾಘವೇಂದ್ರರ ಒಂದು ಕಿಡ್ನಿ ಮತ್ತು ಯಕೃತ್ತನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ರವಾನಿಸಲಾಗಿದೆ. ಶ್ವಾಸಕೋಶವನ್ನು ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಒಂದು ಕಿಡ್ನಿ ಹಾಗೂ ಎರಡು ಕಾರ್ನಿಯಾ ಮತ್ತು ಚರ್ಮವನ್ನು ಮಣಿಪಾಲದ ರೋಗಿಗಳಿಗೆ ಅಳವಡಿಸಲು ನಿರ್ಧರಿಸಲಾಗಿದೆ.
