ಚಾರ್ಮಾಡಿ:(ಫೆ.22) ಪಾದಯಾತ್ರಿಗಳಿಗಾಗಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಬಹಳ ಮುಖ್ಯವಾಗಿ ಪಾದಯಾತ್ರಿಗಳ ಆರೋಗ್ಯ ರಕ್ಷಣೆಗಾಗಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಆರೋಗ್ಯ ಸೇವೆ ನೀಡುತ್ತಿರುವುದು ನಿಜವಾಗಲೂ ಶ್ಲಾಘನೀಯ ಎಂದು ಡಾ. ಕೆ.ವಿ ಮೂರ್ತಿ ಕಕ್ಕಿಂಜೆ ಹೇಳಿದರು.


ಅವರು ಪಾದಯಾತ್ರಿಗಳಿಗೆ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಚಾರ್ಮಾಡಿಯಲ್ಲಿ ತೆರೆಯಲಾದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ಪಾದಯಾತ್ರಿಗಳಿಗೆ ಶುಭ ಹಾರೈಸಿದರು.
ಮಹಾಶಿವರಾತ್ರಿ ಸಂದರ್ಭದಲ್ಲಿ ಸಾವಿರಾರು ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಯ ಮೂಲಕ ಬರುತ್ತಿದ್ದು, ಇವರ ಆರೋಗ್ಯ ರಕ್ಷಣೆಗೆ ಅನುಕೂಲವಾಗುವಂತೆ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಮಾತೃಶ್ರೀ ಅಮ್ಮನವರ ಹಾಗೂ ಶ್ರೀ ಡಿ. ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಆರೋಗ್ಯ ಶಿಬಿರಗಳನ್ನು ತೆರೆಯಲಾಗಿದೆ. ಚಾರ್ಮಾಡಿ, ಮುಂಡಾಜೆ, ಬೂಡುಜಾಲು, ಎಸ್.ಡಿ.ಎಂ ಆಸ್ಪತ್ರೆ, ಎಸ್.ಡಿ.ಎಂ ಡಿ.ಎಡ್ ಕಾಲೇಜು ಬಳಿ, ಹಾಗೂ ಧರ್ಮಸ್ಥಳ ಮುಂತಾದ 6 ಕಡೆಗಳಲ್ಲಿ ಆರೋಗ್ಯ ಶಿಬಿರಗಳನ್ನು ತೆರೆದು, ಅಗತ್ಯವಿರುವ ಔಷಧಿ, ಮುಲಾಮು, ಸ್ಪ್ರೇ ಬ್ಯಾಂಡೇಜ್ ಇತ್ಯಾದಿಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ.
2024ರಲ್ಲಿ 24,506 ಮಂದಿ ಪಾದಯಾತ್ರಿಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡಿದ್ದು, ಇದಕ್ಕಾಗಿ ಸರಿಸುಮಾರು 7 ಲಕ್ಷ ರೂಪಾಯಿಯನ್ನು ಪೂಜ್ಯ ಖಾವಂದರರ ಆದೇಶದಂತೆ ವಿನಿಯೋಗಿಸಲಾಗಿತ್ತು ಎಂದು ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.



ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಅಖಿಲಾ, ನರ್ಸಿಂಗ್ ಅಧೀಕ್ಷಕಿ ಶ್ರೀಮತಿ ಶೆರ್ಲಿ, ಪರ್ಚೇಸ್ ಮ್ಯಾನೇಜರ್ ಅಜಯ್ ಕುಮಾರ್ ಪಿ.ಕೆ, ಶಿಬಿರದ ಸಂಯೋಜಕ ರವೀಂದ್ರ ಗುಡಿಗಾರ್ ಉಪಸ್ಥಿತರಿದ್ದರು. ಜಗನ್ನಾಥ ಎಂ. ಕಾರ್ಯಕ್ರಮ ನಿರೂಪಿಸಿದರು.
