ಹಾವೇರಿ:(ಮಾ.15) ಯುವತಿಯೊಬ್ಬಳ ಹತ್ಯೆ ಪ್ರಕರಣ ಸಂಬಂಧ ಒಬ್ಬನನ್ನು ಹಲಗೇರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಯಾಜ್ ಬಂಧಿತ ಆರೋಪಿ. ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ರಮೇಶ್ ಬ್ಯಾಡಗಿ (22) ಕೊಲೆಯಾದ ಯುವತಿ.

ಇದನ್ನೂ ಓದಿ: ⭕Prostitution: ಹೈ ಪ್ರೊಫೈಲ್ ವೇಶ್ಯಾವಾಟಿಕೆ ಜಾಲ
ಎಸ್ಪಿ ಅಂಶುಕುಮಾರ್ ಮಾತನಾಡಿ, “ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾ.6 ರಂದು ತುಂಗಭದ್ರಾ ನದಿಯಲ್ಲಿ ಅಪರಿಚಿತ ಯುವತಿಯ ಮೃತದೇಹ ಸಿಕ್ಕಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ ಎಂದು ವರದಿ ಬಂದಿತ್ತು. ಮಾ.11 ಇದು ಸ್ವಾತಿ ರಮೇಶ್ ಬ್ಯಾಡಗಿ ಎಂಬ ಯುವತಿಯ ಮೃತದೇಹ ಎಂದು ಪತ್ತೆಯಾಯಿತು” ಎಂದು ತಿಳಿಸಿದರು.

“ನಯಾಜ್, ವಿನಾಯಕ್ ಮತ್ತು ದುರ್ಗಾಚಾರಿ ಎಂಬುವರು ಮಾ.3 ರಂದು ಯುವತಿಯನ್ನು ರಾಣೆಬೆನ್ನೂರು ಕಡೆಗೆ ಕರೆದುಕೊಂಡು ಹೋಗಿದ್ದರು. ಯಾವುದೋ ವಿಷಯವಾಗಿ ಜಗಳ ನಡೆದು ಬಳಿಕ ಮೂವರು ಸೇರಿ ಯುವತಿಯನ್ನು ಹತ್ಯೆ ಮಾಡಿ, ವಾಹನದಲ್ಲಿ ಮೃತವನ್ನು ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಗೆ ತೆಗೆದುಕೊಂಡು ಬಂದು ತುಂಗಭದ್ರಾ ನದಿಗೆ ಎಸೆದಿದ್ದರು. ಪ್ರಕರಣ ಸಂಬಂಧ ನಯಾಜ್ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ತಲೆ ಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಶೋಧ ನಡೆಯುತ್ತಿದೆ. ಇನ್ನಿಬ್ಬರ ಬಂಧನದ ನಂತರ ಕೊಲೆಗೆ ನಿಖರ ಕಾರಣ ಏನು ಎಂಬುದು ತಿಳಿಯಲಿದೆ” ಎಂದು ಹೇಳಿದರು.

ಪ್ರಕರಣದ ಹಿನ್ನೆಲೆ:
ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಮಾರ್ಚ್ 6ರಂದು ಯುವತಿಯ ಮೃತದೇಹ ಪತ್ತೆಯಾಗಿತ್ತು. ಪೊಲೀಸರು, ಮೊದಲು ಅಪರಿಚಿತ ಯುವತಿ ಶವ ಎಂದು ಘೋಷಣೆ ಮಾಡಿದ್ದರು. ಕೊನೆಗೆ ವಾರಸುದಾರರು ಯಾರೂ ಇಲ್ಲದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಒಂದು ದಿನ ಮೃತದೇಹವನ್ನು ಇಟ್ಟುಕೊಂಡಿದ್ದರು. ಮಾರನೇಯ ದಿನ ಕಾನೂನು ಪ್ರಕಾರ ಮೃತದೇಹದ ಅಂತ್ಯಸಂಸ್ಕಾರ ನಡೆಸಿದ್ದರು.

ಸ್ವಾತಿಗಾಗಿ ಮೂರು ದಿನ ಹುಡುಕಾಟ ನಡೆಸಿ ಬಳಿಕ ಮಾ.7 ರಂದು ಸ್ವಾತಿ ತಾಯಿ ಶಶಿರೇಖಾ, ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದರು. ಮತ್ತೊಂದೆಡೆ, ತನಿಖೆ ತೀವ್ರಗೊಳಿಸಿದ್ದ ಹಲಗೇರಿ ಪೊಲೀಸರಿಗೆ, ಮಾ.3 ರಿಂದಲೇ ಸ್ವಾತಿ ಕಾಣೆಯಾಗಿರುವುದಾಗಿ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಸ್ವಾತಿ ತಾಯಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದ ವಿಷಯ ತಿಳಿದು ಬಂತು. ಅವರನ್ನು ಕರೆದು ಮೃತದೇಹದ ಪೋಟೋಗಳನ್ನು ತೋರಿಸಿದಾಗ, ಸ್ವಾತಿ ತಾಯಿ ಶಶಿರೇಖಾ ಅದು ಸ್ವಾತಿಯದ್ದೇ ಮೃತದೇಹ ಎಂದು ಖಚಿತ ಪಡಿಸಿದ್ದರು.
ರಾಣೆಬೆನ್ನೂರಿನ ಆಸ್ಪತ್ರೆಯೊಂದರಲ್ಲಿ ಸ್ವಾತಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಸ್ವಾತಿ ತಂದೆ ಮೃತಪಟ್ಟಿದ್ದು, ತಾಯಿ ಜೊತೆ ವಾಸವಿದ್ದರು ಎಂದು ತಿಳಿದು ಬಂದಿದೆ.
