ಬೆಳ್ತಂಗಡಿ:(ಎ.23) ಬೆಳ್ತಂಗಡಿ 80 ಗ್ರಾಮಗಳನ್ನು ಹೊಂದಿರುವ ಬಹು ದೊಡ್ಡ ತಾಲೂಕು. ಇಲ್ಲಿನ ಬಹುತೇಕ ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ರೈತರು ಪಶು ಸಂಗೋಪನೆ ಮತ್ತು ಜಾನುವಾರುಗಳ ಸಾಕಾಣಿಕೆಯಲ್ಲಿ ನಿರತರಾಗಿದ್ದಾರೆ. ಇವೆಲ್ಲ ಜಾನುವಾರುಗಳ ಮೇಲ್ವಿಚಾರಣೆ ಮತ್ತು ಶುಶ್ರೂಷೆಗೆ ತಾಲುಕಿನ ಪಶು ಆಸ್ಪತ್ರೆಯೇ ಬೆನ್ನೆಲುಬು.

ಆದರೆ ಪಶು ಆಸ್ಪತ್ರೆ ಹಲವು ದಶಕಗಳ ಹಿಂದೆ ನಿರ್ಮಿತವಾಗಿರುವುದರಿಂದ ಆಸ್ಪತ್ರೆಯ ತುರ್ತು ಶಸ್ತ್ರ ಚಿಕಿತ್ಸೆಯ ಕೊಠಡಿ ಶಿಥಿಲಾವಸ್ಥೆಯನ್ನು ತಲುಪಿತ್ತು. ಇದರಿಂದ ಸಾಕು ಪ್ರಾಣಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆಯನ್ನು ನೀಡಲು ಅನಾನುಕೂಲವಾದ ಸಂದರ್ಭ ಎದುರಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಜಾನುವಾರುಗಳನ್ನು ಮಂಗಳೂರಿಗೆ ಕಳಿಸಿ ಕೊಡಲಾಗುತ್ತಿತ್ತು. ಇದು ರೈತರಿಗೆ ತ್ರಾಸ ದಾಯಕ ಮತ್ತು ದುಬಾರಿಯ ಕೆಲಸವಾಗಿತ್ತು.
ಇದರ ನವೀಕರಣ ಮತ್ತು ಸುಸಜ್ಜಿತವಾದ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಮುಂದಾದ ಬೆಳ್ತಂಗಡಿ ರೋಟರಿ ಸಂಸ್ಥೆಯು, ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರು ಮತ್ತು ಬೆಂಗಳೂರಿನ ಜಿ ಐ ಆಟೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಹಕಾರದೊಂದಿಗೆ ಪಶು ಆಸ್ಪತ್ರೆಯ ಆಪರೇಷನ್ ಥಿಯೇಟರ್(OT) ಸುಮಾರು 9 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ಸಂಪೂರ್ಣವಾಗಿ ನವೀಕರಣಗೊಳಿಸಿದೆ.
ಇದರ ನವೀಕೃತ ತಾಲೂಕು ಪಶು ಆಸ್ಪತ್ರೆಯ ಆಪರೇಷನ್ ಥಿಯೇಟರ್ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ತಾಲೂಕು ಪಶು ಆಸ್ಪತ್ರೆಯ ವಠಾರದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಜಿ ಐ ಆಟೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರೋ. ಜಗದೀಶ್ ಮುಗುಳಿ ಮತ್ತು ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರಿನ ಅಧ್ಯಕ್ಷೆ ರೋ. ಸುಪ್ರಿಯಾ ಖಾಂಡರಿ ರಿಬ್ಬನ್ ಎಳೆದು ನಾಮ ಫಲಕ ಅನಾವರಣ ಗೊಳಿಸುವ ಮೂಲಕ ನವೀಕೃತ ತಾಲೂಕು ಪಶು ಆಸ್ಪತ್ರೆಯ ಆಪರೇಷನ್ ಥಿಯೇಟರ್ ಗೇ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್, ಡಾ. ಅರುಣ್ ಕುಮಾರ್ ಶೆಟ್ಟಿ ಉಪ ನಿರ್ದೇಶಕರು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಂಗಳೂರು, ಡಾ. ಶಿವಣ್ಣ ಜಂಟಿ ನಿರ್ದೇಶಕರು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಂಗಳೂರು ಮತ್ತು ತಾಲೂಕು ಪಶು ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ರವಿಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತಾಡಿದ ಶಾಸಕ ಹರೀಶ್ ಪೂಂಜ, ಸಮಾಜದ ಮೇಲಿನ ಕಾಳಜಿ ಮತ್ತು ಅಭಿವೃದ್ಧಿಯ ದೂರದೃಷ್ಟಿತ್ವ ಇದ್ದುದರಿಂದ ಈ ಕಾರ್ಯ ಯಶಸ್ವಿಯಾಗಿದೆ. ಒಂದು ಸರ್ಕಾರಿ ಪಶು ವೈದ್ಯಕೀಯ ಚಿಕಿತ್ಸಾಲಯವನ್ನು ಸಂಘ ಸಂಸ್ಥೆಯೊಂದು ಅಭಿವೃದ್ಧಿ ಪಡಿಸಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಮೊದಲ ಉದಾಹರಣೆ.ಈ ಕಾರ್ಯ ಇತರೆ ಸಂಘ ಸಂಸ್ಥೆಗಳಿಗೆ ಮಾದರಿ. ಈಗೀನ ಸಂದರ್ಭದಲ್ಲಿ ಇಲ್ಲಾ ಸೇವಾ ಕಾರ್ಯಗಳನ್ನು ಸರ್ಕಾರದ ವತಿಯಿಂದ ಮಾಡಲು ಅಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ ರೋಟರಿಯಂತ ಸಂಘ ಸಂಸ್ಥೆಗಳು ಜೊತೆ ಸೇರಿದಾಗ ಸ್ವಾಸ್ಥ್ಯಸಮಾಜ ನಿರ್ಮಾಣವಾಗುತ್ತದೆ ಎಂದರು.
ಈ ಹಿಂದೆ ರೋಟರಿ ಸಂಸ್ಥೆ ಸರ್ಕಾರಿ ಶಾಲೆಗಳಲ್ಲಿ ಅಭಿವೃದ್ಧಿ, ಕೊಠಡಿಗಳ ನಿರ್ಮಾಣ, ಶಾಲ ನವೀಕರಣ, ಆಸ್ಪತ್ರೆಗೆ ಸುಸಜ್ಜಿತವಾದ ಉಪಕರಣಗಳ ಕೊಡುಗೆ, ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣ, ನೆರೆ – ಕೋವಿಡ್ ನಂತಹ ಸಂದರ್ಭದಲ್ಲಿ ರೋಟರಿ ಸಂಸ್ಥೆ ಮಾಡಿದ ಸೇವಾ ಕಾರ್ಯಗಳನ್ನು ನೆನಪಿಸಿ ಕೊಂಡು ರೋಟರಿ ಸಂಸ್ಥೆ ಸರ್ಕಾರಿ ಕಟ್ಟಡವನ್ನು ಅಭಿವೃದ್ಧಿ ಗೊಳಿಸಿದ್ದಕ್ಕೆ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರಿನ ಅಧ್ಯಕ್ಷೆ ರೋ. ಸುಪ್ರಿಯಾ ಖಾಂಡರಿ ಮಾತನಾಡಿ ಬೆಳ್ತಂಗಡಿಯೊಂದಿಗೆ ಅನೇಕ ವರ್ಷಗಳಿಂದ ಅವಿನಾಭಾವ ಸಂಬಂಧವಿದೆ. ಬೆಳ್ತಂಗಡಿ ರೋಟರಿ ಸಂಸ್ಥೆ ಜೊತೆ ಸೇರಿ ಈಗಾಗಲೇ ನಾವು ಅನೇಕ ಕಾರ್ಯಕ್ರಮಗಳನ್ನು ಬೆಳ್ತಂಗಡಿಯಲ್ಲಿ ಮಾಡಿದ್ದೇವೆ. ಸೇವಾ ಕಾರ್ಯಗಳು ಗ್ರಾಮೀಣ ಭಾಗದ ಜನರಿಗೆ ತಲುಪಬೇಕೆಂಬುವುದು ನಮ್ಮೆಲ್ಲರ ಆಶಯ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಬೆಳ್ತಂಗಡಿಯಲ್ಲಿ ಮಾಡಲು ಪ್ರಯತ್ನಿಸುತ್ತುವೆ.ಇದಕ್ಕೆ ಬೆಳ್ತಂಗಡಿ ರೋಟರಿ ಸಂಸ್ಥೆ ಸದಾ ಜೊತೆಯಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಂಗಳೂರಿನ ಉಪ ನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಮಾತನಾಡಿ , ಇದೊಂದು ಅತ್ಯವಶ್ಯಕವಾಗಿದ್ದ ಹೆಮ್ಮೆಯ ಕಾರ್ಯ ಯಾಕೆಂದರೆ ಮಂಗಳೂರು ಪಶುಪಾಲನ ಇಲಾಖೆ ವ್ಯಾಪ್ತಿಗೆ ಬರುವ 9 ತಾಲೂಕುಗಳ ಪೈಕಿ. ಶೇಕಡಾ 25 ರಷ್ಟು ಜಾನುವಾರುಗಳ ಸಾಕಣಿಕೆ ಬೆಳ್ತಂಗಡಿ ತಾಲೂಕಿನಲ್ಲೆ ಇದೆ.

ನಮ್ಮದೊಂದು ಮೂಕ ಪ್ರಾಣಿಗಳ ಇಲಾಖೆ. ಸರ್ಕಾರದ ಮಟ್ಟದಲ್ಲಿ ನಮ್ಮನ್ನು ಕೇಳುವವರ ಮತ್ತು ಅನುದಾನ ಹೊದಗಿಸಲು ಮುಂದಾಗುವವರ ಸಂಖ್ಯೆ ಅತ್ಯಂತ ಕಡಿಮೆ ಇರುತ್ತದೆ. ಕಾರಣ ನಮ್ಮ ಜಾನುವಾರುಗಳಿಗೆ ಮಥ ಪಂಥಗಳಿಲ್ಲ ಹಾಗು ಅವುಗಳ ದ್ವನಿಯೂ ಸರ್ಕಾರಕ್ಕೆ ಕೇಳುವುದಿಲ್ಲ. ಈ ನಿಟ್ಟಿನಲ್ಲಿ ರೋಟರಿಯಂತಹ ಸಂಸ್ಥೆ ಹಲವರ ಸಹಕಾರದಿಂದ ತಾಲೂಕಿನ ಪಶು ಪಾಲನಾ ಇಲಾಖೆಯನ್ನು ನವೀಕೃತ ಗೊಳಿಸಿರುವುದು ಶ್ಲಾಘನೀಯ ಎಂದರು.
ಬೆಳ್ತಂಗಡಿಯ ರೋಟರಿ ಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿರುವ ರೋಟರಿ ಸಂಸ್ಥೆಯು ಈಗಾಗಲೇ ಸರ್ಕಾರಿ ಶಾಲಕಾಲೇಜುಗಳ ದುರಸ್ತಿ ಕಾರ್ಯ, ಶೌಚಾಲಯ ಮತ್ತು ಶಾಲಾ ಕೊಠಡಿಗಳ ನಿರ್ಮಾಣ, ಅಗತ್ಯವಿರುವ ಮತ್ತು ಅರ್ಹರಿಗೆ ಸ್ಕಾಲರ್ಶಿಪ್ ವಿತರಣೆ, ಸರ್ಕಾರಿ ಆಸ್ಪತ್ರೆಗಳ ದುರಸ್ಥಿ ಕಾರ್ಯ ಮತ್ತು ಉಪಕರಣಗಳ ಕೊಡುಗೆ ಹೀಗೆ ಅನೇಕ ಕಾರ್ಯಗಳನ್ನು ಸರ್ವರ ಸಹಕಾರದೊಂದಿಗೆ ಮಾಡುತ್ತಾ ಬಂದಿದೆ. ಇದರ ಭಾಗವಾಗಿ ತಾಲೂಕು ಪಶು ಆಸ್ಪತ್ರೆಯ ಆಪರೇಷನ್ ಥಿಯೇಟರ್ ನವೀಕರಣ ಕಾರ್ಯವು ಒಂದು. ಇಂತಹ ಮೂಲಭೂತ ಸೌಕರ್ಯ ತಾಲುಕಿನ ಪಶು ಆಸ್ಪತ್ರೆಗೆ ಅನೇಕ ದಿನಗಳಿಂದ ಅವಶ್ಯಕವಿತ್ತು. ಇದನ್ನು ಸುಸಜ್ಜಿತವಾಗಿ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಆಸ್ಪತ್ರೆಯ ಆಡಳಿತ ಮಂಡಳಿಯ ಮೇಲಿರುತ್ತದೆ. ಇದರಿಂದ ಬೆಳ್ತಂಗಡಿ ರೈತ ವರ್ಗಕ್ಕೆ ಬಹುದೊಡ್ಡ ಅನುಕೂಲವಾಗಲಿದೆ ಎಂದು ರೋಟರಿ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ಪೂರನ್ ವರ್ಮ ಹೇಳಿದರು.

ಕಾರ್ಯಕ್ರಮದಲ್ಲಿ ಜಿ ಐ ಆಟೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರೋ. ಜಗದೀಶ್ ಮುಗುಳಿ, ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರಿನ ಅಧ್ಯಕ್ಷೆ ರೋ. ಸುಪ್ರಿಯಾ ಖಾಂಡರಿ, ಕಾರ್ಯದರ್ಶಿ ರೋ ನರಸಿಂಹನ್ ಕಣ್ಣನ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೋ. ಪೂರನ್ ವರ್ಮ, ಕಾರ್ಯದರ್ಶಿ ರೋ. ಸಂದೇಶ್ ಕುಮಾರ್ ರಾವ್ ರವರನ್ನು ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ಬೆಳ್ತಂಗಡಿ ತಾಲೂಕಿ ಪಶು ಪಾಲನಾ ಆಸ್ಪತ್ರೆಯ ವತಿಯಿಂದ ಶಾಸಕ ಹರೀಶ್ ಪೂಂಜ ಮತ್ತು ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್ ಗೌರವಿಸಿ ಸನ್ಮಾನಿಸಲಾಯಿತು.

ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪ್ ಸಿಂಹ ನಾಯಕ್ ಮತ್ತು ಜಿ ಐ ಆಟೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರೋ. ಜಗದೀಶ್ ಮುಗುಳಿ, ರೋಟರಿ ಕ್ಲಬ್ ಇಂದಿರಾನಗರ ಬೆಂಗಳೂರಿನ ಅಧ್ಯಕ್ಷೆ ರೋ. ಸುಪ್ರಿಯಾ ಖಾಂಡರಿ, ಕಾರ್ಯದರ್ಶಿ ರೋ ನರಸಿಂಹನ್ ಕಣ್ಣನ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೋ. ಪೂರನ್ ವರ್ಮ, ಕಾರ್ಯದರ್ಶಿ ರೋ. ಸಂದೇಶ್ ಕುಮಾರ್ ರಾವ್, ಡಾ. ಅರುಣ್ ಕುಮಾರ್ ಶೆಟ್ಟಿ ಉಪ ನಿರ್ದೇಶಕರು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಂಗಳೂರು, ಡಾ. ಶಿವಣ್ಣ ಜಂಟಿ ನಿರ್ದೇಶಕರು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಂಗಳೂರು, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಸೇರಿದಂತೆ ಇಂದಿರಾನಗರ ಬೆಂಗಳೂರು ಮತ್ತು ಬೆಳ್ತಂಗಡಿ ರೋಟರಿಯ ಸರ್ವ ಸದಸ್ಯರು ಹಾಗು ತಾಲೂಕು ಪಶು ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ರವಿಕುಮಾರ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ತಾಲೂಕಿನ ಹಿರಿಯ ವಕೀಲ ರೋ. ಧನಂಜಯ ರಾವ್ ನಿರೂಪಿಸಿ, ತಾಲೂಕು ಪಶು ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ರವಿಕುಮಾರ್ ವಂದಿಸಿದರು.
