ಉಜಿರೆ( ಎ.30): ಜ್ಞಾನ, ಕೌಶಲ್ಯವನ್ನು ಆಧರಿಸಿದ ಮೌಲ್ಯವರ್ಧಿತ ಕಾರ್ಯವೈಖರಿಯಿಂದ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯನ್ನು ವರ್ತಮಾನದ ಅಗತ್ಯ, ಭವಿಷ್ಯದ ಆದ್ಯತೆಗಳಿಗೆ ಅನುಗುಣವಾಗಿ ಉನ್ನತೀಕರಿಸಬಹುದು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: 🛑ಮಂಗಳೂರು: ಕೊಲೆಯಾದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ ಪ್ರಕರಣ
ಮಂಗಳವಾರ ಉಜಿರೆಯ ಎಸ್.ಡಿ.ಎಂ ಸ್ನಾತಕೊತ್ತರ ಕೇಂದ್ರದ ವಿವಿಧ ವಿಭಾಗಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಪರಿಶೀಲನಾ ಪ್ರಕ್ರಿಯೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪ್ರಧಾನ ಆಶಯ ಭಾಷಣ ಪ್ರಸ್ತುತಪಡಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ವಲಯದಲ್ಲಿ ಕ್ಷಣಕ್ಷಣಕ್ಕೆ ಗಮನಾರ್ಹ ಬದಲಾವಣೆಗಳು ಆಗುತ್ತಿವೆ. ಹೊಸ ತಲೆಮಾರಿನ ಯುವ ಸಮೂಹವು ಕಲಿಕೆಗೆ ಸಂಬಂಧಿಸಿದಂತೆ ಮಹತ್ವಾಕಾಂಕ್ಷಿ ನಿರೀಕ್ಷೆಗಳನ್ನು ಇರಿಸಿಕೊಂಡಿದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹೆಜ್ಜೆಗಳು ಗಟ್ಟಿಗೊಳ್ಳಬೇಕು. ಆ ಮೂಲಕ ಸಾಂಸ್ಥಿಕ ಬೆಳವಣಿಗೆ ನಿಖರಗೊಳ್ಳುತ್ತದೆ ಎಂದರು.
ಆಯಾ ಕಾಲದ ಅನಿವಾರ್ಯತೆಗಳಿಗೆ ತಕ್ಕಂತೆ ಉನ್ನತ ಶಿಕ್ಷಣ ವಲಯವೂ ಹೊಸ ಹೆಜ್ಜೆಗಳನ್ನು ಕ್ರಮಿಸಬೇಕು. ಬೋಧನೆ ಮತ್ತು ಕಲಿಕೆಗೆ ಮೌಲ್ಯವರ್ಧನೆಯನ್ನು ಅನ್ವಯಿಸಿಕೊಳ್ಳಬೇಕು. ಸಂಶೋಧನೆ, ಸಾಮುದಾಯಿಕ ಹೊಣೆಗಾರಿಕೆಯ ವಿಸ್ತರಣಾ ಚಟುವಟಿಕೆಗಳು, ಗುಣಮಟ್ಟದ ಶೈಕ್ಷಣಿಕ ಸೌಲಭ್ಯಗಳು ಶೈಕ್ಷಣಿಕ ಸಾಂಸ್ಥಿಕ ಅಸ್ಮಿತೆಯನ್ನು ನವೀಕರಿಸಿಕೊಳ್ಳುವುದಕ್ಕೆ ನೆರವಾಗುತ್ತವೆ ಎಂದರು.

ಬೋಧನೆ, ಸಂಶೋಧನೆ ಮತ್ತು ಕಲಿಕೆಗೆ ಸಂಬಂಧಿಸಿದಂತಹ ಸಾಂಸ್ಥಿಕ ಆದ್ಯತೆಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನೇ ಕೇಂದ್ರೀಕರಿಸಿಕೊಂಡಿರುತ್ತವೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪೂರಕವಾಗುವ ಕಾರ್ಯಕ್ರಮಗಳು, ಸಾಮಾಜಿಕವಾಗಿ ಮಹತ್ವವೆನ್ನಿಸುವ ಪ್ರಯೋಗಶೀಲ ಹೆಜ್ಜೆಗಳ ಮೂಲಕ ಸಮಗ್ರ ಅಭ್ಯುದಯ ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯ ಬಿ.ಪಿ ವಿವಿಧ ವಿಭಾಗಗಳ ರಚನಾತ್ಮಕ ಸ್ವರೂಪವನ್ನು ಪರಿಚಯಿಸಿದರು. ಬೋಧನೆ, ಸಂಶೋಧನೆ, ಪಠ್ಯಕೇಂದ್ರಿತ ಕಲಿಕೆ, ಪಠ್ಯೇತರ ಚಟುವಟಿಕೆಗಳು, ಸಮಾಜಪರ ವಿಸ್ತರಣಾ ಹೆಜ್ಜೆಗಳೊಂದಿಗೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಗುರುತಿಸಿಕೊಂಡಿದೆ. ವಿದ್ಯಾರ್ಥಿಗಳು ಅಧ್ಯಯನನಿರತರಾದಾಗಲೇ ಬೋಧನೆಯ ಅವಕಾಶವನ್ನು ಒದಗಿಸುವ ‘ಸ್ಟೂಡೆಂಟ್ ಫ್ಯಾಕಲ್ಟಿ’ ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಪರಿಶೀಲನಾ ಸಮಿತಿಯ ತಜ್ಞರಾದ ಎಸ್.ಡಿ.ಎಂ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ. ಜಯಕುಮಾರ್ ಎ ಶೆಟ್ಟಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಅಕ್ಯಾಡೆಮಿಕ್ ಸಂಯೋಜಕರಾದ ಎಸ್.ಎನ್.ಕಾಕತ್ಕರ್ ಅವರು ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿವರಗಳನ್ನು ಪಡೆದು ಸಲಹೆ ಸೂಚನೆಗಳನ್ನು ನೀಡಿದರು. ಎಸ್.ಡಿ.ಎಂ ಕಾಲೇಜಿನ ಉಪಪ್ರಾಂಶುಪಾಲರಾದ ನಂದಕುಮಾರಿ ಕೆ.ಪಿ ಉಪಸ್ಥಿತರಿದ್ದರು.


