ಉಜಿರೆ(ಜು.10): ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಟ್ರಸ್ಟ್ 2025ನೇ ಶೈಕ್ಷಣಿಕ ವರ್ಷದಲ್ಲಿ ಮೀಸಲಿಟ್ಟಿರುವ ಒಟ್ಟು 2.50 ಕೋಟಿ ರೂ. ಮೊತ್ತದ ವಿದ್ಯಾರ್ಥಿವೇತನ ವಿತರಣೆ ಪ್ರಕ್ರಿಯೆಗೆ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅವರು ಇಂದು (ಜು.10) ಸಾಂಕೇತಿಕ ಚಾಲನೆ ನೀಡಿದರು.


ಇದನ್ನೂ ಓದಿ: 🔴ಉಜಿರೆ: ಜುಲೈ.11 ರಂದು ಉಜಿರೆಯಲ್ಲಿ ಹೆಗ್ಡೆ ಮೆಡಿಕಲ್ಸ್ ಶುಭಾರಂಭ
ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ 2 ಸಾವಿರ ವಿದ್ಯಾರ್ಥಿಗಳನ್ನು ಒಳಗೊಳ್ಳುವ ವಿದ್ಯಾರ್ಥಿವೇತನ ಯೋಜನೆಯ ಮೊದಲ ಕಂತಿನ ಚೆಕ್ ವಿತರಿಸಿದರು.
ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದಿರುವ ಅರ್ಹ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿದ್ಯಾರ್ಥಿವೇತನ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ನಡೆಸಿ ಮನೆಯನ್ನು ಬೆಳಗಬೇಕು. ಹಣ ಸಂಪಾದನೆಗೆ ಇರುವ ಶ್ರಮವನ್ನು ಅರಿಯಬೇಕು. ಸಮಾಜದಲ್ಲಿ ಪ್ರಕಾಶಿಸುವ ವ್ಯಕ್ತಿತ್ವಗಳಾಗಿ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಎಸ್.ಡಿ.ಎಂ. ಸಂಸ್ಥೆಗಳ 1,450 ವಿದ್ಯಾರ್ಥಿಗಳ ಜೊತೆಗೆ ಇತರ ಸಂಸ್ಥೆಗಳ ವಿದ್ಯಾರ್ಥಿಗಳನ್ನೂ ಈ ವಿದ್ಯಾರ್ಥಿವೇತನ ಯೋಜನೆ ಒಳಗೊಂಡಿದೆ ಎಂದ ಅವರು, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಸ್.ಡಿ.ಎಂ. ಕಾಲೇಜು, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜು, ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಇತ್ಯಾದಿ ಸಂಸ್ಥೆಗಳ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಬದ್ಧತೆ ಹಾಗೂ ಕಾಳಜಿ ಕುರಿತು ವಿವರಿಸಿದರು.
ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, “ಚತುರ್ದಾನ ಪರಂಪರೆಯ ಶ್ರೀ ಕ್ಷೇತ್ರ ಧರ್ಮಸ್ಥಳವು ಶ್ರೇಷ್ಠ, ಮೌಲ್ಯಯುತ ಶಿಕ್ಷಣ ಒದಗಿಸುತ್ತಿದೆ. 1985ರಿಂದ ಎಸ್.ಡಿ.ಎಂ. ಎಜುಕೇಶನಲ್ ಟ್ರಸ್ಟ್ ಮೂಲಕ ನಮ್ಮ ಸಂಸ್ಥೆಗಳ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ನೀಡುತ್ತಿದ್ದು, ಆ ಮೂಲಕ ವಿದ್ಯಾದಾನದ ಕ್ರಾಂತಿ ನಡೆಯುತ್ತಿದೆ” ಎಂದರು.

ಎಸ್ ಡಿ ಎಂ ಎಜುಕೇಶನಲ್ ಸೊಸೈಟಿಯ ಇನ್ನೋರ್ವ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಎಸ್ ಡಿ ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ, ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯಾ ಬಿ.ಪಿ. ಉಪಸ್ಥಿತರಿದ್ದರು.

ಎಸ್ ಡಿ ಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ವಂದಿಸಿದರು. ಡಾ. ನೆಫೀಸತ್ ಪಿ. ನಿರೂಪಿಸಿದರು.
ವೃತ್ತಿಪರ ಮತ್ತು ಸ್ನಾತಕೋತ್ತರ ಕೋರ್ಸಿಗೆ ಅನುಗುಣವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೆ 10 ತಿಂಗಳ ಕಾಲ 1,000 ಮತ್ತು 1,250 ರೂ.ಗಳನ್ನು ವಿದ್ಯಾರ್ಥಿಗಳ ಖಾತೆಗೆ ಜಮೆ ಮಾಡಲಾಗುತ್ತದೆ.
