ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ, ಡಿ. ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದೊಂದಿಗೆ ಅತ್ಯಾಧುನಿಕ ಮಾದರಿಯಲ್ಲಿ ರೂ.2 ಕೋಟಿ ವೆಚ್ಚದಲ್ಲಿ ಧರ್ಮಸ್ಥಳದ ಶಾಂತಿವನದಲ್ಲಿ ಸುಸಜ್ಜಿತವಾಗಿ ಪುನರ್ ನವೀಕರಣಗೊಂಡಿರುವ ಮಹಿಳೆಯರ ಚಿಕಿತ್ಸಾ ವಿಭಾಗ ‘ಸಿಂದೂರ’ ನವರಾತ್ರಿಯ ಶುಭಾವಸರದಲ್ಲಿ ಸೆ. 25 ರಂದು ಲೋಕಾರ್ಪಣೆಗೊಂಡಿತು.

ಇದನ್ನೂ ಓದಿ: 🔴ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾ ಮತ್ತು ಕರಕುಶಲ ಚಟುವಟಿಕೆ
ನವೀಕರಣಗೊಂಡಿರುವ ಮಹಿಳೆಯರ ಚಿಕಿತ್ಸಾ ವಿಭಾಗ ಸಿಂದೂರ ಇದರ ಲೋಕಾರ್ಪಣೆಯನ್ನು ಧರ್ಮಸ್ಥಳದ ಶ್ರೀಮತಿ ಶ್ರದ್ಧಾ ಅಮಿತ್ ರವರು ನೆರವೇರಿಸಿದರು. ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶಾಂತಿವನ 1987ರಲ್ಲಿ ಆರಂಭಗೊಂಡಿತು. ಗಿನ್ನೆಸ್ ಪ್ರಶಸ್ತಿ ಪುರಸ್ಕೃತದ ಜೊತೆಗೆ ಅಂತರರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಗರಿಮೆ ಹೊಂದಿರುವ ಶಾಂತಿವನ ಸಕಲ ವ್ಯವಸ್ಥೆಗಳನ್ನು ಒಳಗೊಂಡ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಾಗಿ ಗಮನ ಸೆಳೆದಿದೆ.
NABH ಮಾನ್ಯತೆ ಪಡೆದಿರುವ ಶಾಂತಿವನದ ವೈದ್ಯರ, ಸಿಬ್ಬಂದಿಗಳ ನಗುಮೊಗದ ಲವಲವಿಕೆಯ ಸೇವೆ ಚಿಕಿತ್ಸೆ ಪಡೆಯುವ ಮಂದಿಗೆ ಹೆಚ್ಚಿನ ಆರಾಮವನ್ನು ನೀಡುತ್ತದೆ.
ಪ್ರಕೃತಿ ಚಿಕಿತ್ಸಾ ವಿಧಾನದ ಮೂಲಕ ಸಹಜ ರೀತಿಯಲ್ಲಿ ಆತ್ಮವನ್ನು ಮತ್ತು ದೇಹವನ್ನು ಶುದ್ದೀಕರಿಸುವ ಕಾರ್ಯದ ಜತೆಗೆ ಮೈಮನದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಶಾಂತಿವನ ಸಹಕಾರಿಯಾಗಿದೆ.
ಈ ಸಂದರ್ಭದಲ್ಲಿ ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿಯಾದ ಬಿ. ಸೀತಾರಾಮ ತೋಳ್ಪಾಡಿತ್ತಾಯ , ಶಾಂತಿವನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶಿವಪ್ರಸಾದ್ ಶೆಟ್ಟಿ , ವೈದ್ಯ ವೃಂದ, ಆಡಳಿತ ಅಧಿಕಾರಿ, ವ್ಯವಸ್ಥಾಪಕರು, ಉಪಸ್ಥಿತರಿದ್ದರು.



